ಬೆಂಗಳೂರು: ಎನ್‌ಐಎ ಅಧಿಕಾರಿಯ ಸೋಗಿನಲ್ಲಿ ಬೆಂಗಳೂರಿನ ವೃದ್ಧೆಯೊಬ್ಬರಿಗೆ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡಿ 2.1 ಕೋಟಿ ಹಣ ಲಪಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಜಯನಗರದ ನಿವಾಸಿ 78 ವರ್ಷದ ವೃದ್ಧೆ ಹಾಗೂ ಪುತ್ರಿಗೆ ಏಪ್ರಿಲ್ 13 ರಂದು ವಾಟ್ಸಪ್ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ ತನ್ನನ್ನು ಎನ್‌ಐಎ ಅಧಿಕಾರಿ ಪ್ರದೀಪ್ ಜಸ್ವಾಲ್ ಎಂದು ಪರಿಚಯಿಸಿಕೊಂಡಿದ್ದಾನೆ. ನಿಮ್ಮ ಡೆಬಿಟ್ ಕಾರ್ಡ್ ಅನ್ನು ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯನೊಬ್ಬ ಬಳಸುತ್ತಿದ್ದಾನೆ ಎಂದು ಬೆದರಿಸಿದ್ದಾನೆ.
ಈ ಬಗ್ಗೆ ಯಾರಿಗೂ ಮಾಹಿತಿ ನೀಡಬಾರದು ಎಂದು ಬೆದರಿಸಿ, ಮಹಿಳೆಯ ಕುಟುಂಬ ಸದಸ್ಯರ ಗುರುತಿನ ದಾಖಲೆಗಳ ಪ್ರತಿಗಳನ್ನು ಪಡೆದುಕೊಂಡು ನಿಮ್ಮ ಪುತ್ರಿಯೂ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹೇಳಿ ಪೊಲೀಸ್ ಠಾಣೆಯಂತೆ ಕಾಣುವ ಕಟ್ಟಡದಿಂದ ವಿಡಿಯೋ ಕಾಲ್ ಮಾಡಿದ್ದಾನೆ.
ತನಿಖೆಗೆ ಸಹಕರಿಸದಿದ್ದರೆ ಸಾರ್ವಜನಿಕವಾಗಿ ಬಂಧಿಸಬೇಕಾದೀತು ಎಂದು ಬೆದರಿಸಿ ಆರ್‌ಬಿಐ ಮಾರ್ಗಸೂಚಿಯಂತೆ ಹಣದ ವ್ಯವಹಾರಗಳ ಪರಿಶೀಲನೆ ಮಾಡಬೇಕಿದೆ ಎಂದು ಹೇಳಿ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡಿದ್ದಾನೆ.
ವಂಚಕನ ಮಾತು ನಂಬಿದ ತಾಯಿ, ಮಗಳು ಅವರು ಹೇಳಿದ ಖಾತೆಗಳಿಗೆ ಹಣವನ್ನು ವರ್ಗಾಹಿಸಿದ್ದಾರೆ. ತಮ್ಮ ಬಳಿ ಇದ್ದ ಚಿನ್ನವನ್ನೂ ಅಡವಿಟ್ಟು ಹಣ ವರ್ಗಾವಣೆ ಮಾಡಿದ್ದಾರೆ. ಹೀಗೆ ಏ.15 ರಿಂದ 20 ರವರೆಗೆ ಒಟ್ಟು 2.1 ಕೋಟಿ ಹಣವನ್ನು ಲಪಟಾಯಿಸಿದ್ದಾನೆ.
ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ತಕ್ಷಣ ಅವರು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರು ವಂಚಕರ ಪತ್ತೆಗೆ ಬಲೆ ಬೀಸಿದ್ದಾರೆ.