ಬೆಂಗಳೂರು: ಚಿತ್ರರಂಗದ ನಟಿಯರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿಕೃತ ಮನಸ್ಥಿತಿ ಪ್ರದರ್ಶಿಸುವ ಜಾಲಕ್ಕೆ ಕೊನೆಯೇ ಇಲ್ಲದಂತಾಗಿದೆ. ಇತ್ತೀಚೆಗಷ್ಟೇ ನಟಿ ರಮ್ಯಾ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸೈಬರ್ ದೂರು ನೀಡಿ, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ ಕೆಲವರ ವರ್ತನೆಯಲ್ಲಿ ಬದಲಾವಣೆ ಬಂದಿಲ್ಲ. ಇದೀಗ ನಟಿ ಐಶ್ವರ್ಯ ಸಿಂದೋಗಿ ಅವರು ತಮಗೆ ಆನ್‌ಲೈನ್‌ನಲ್ಲಿ ಸತತವಾಗಿ ಲೈಂಗಿಕವಾಗಿ ನಿಂದಿಸುವ ಹಾಗೂ ಅವಹೇಳನಕಾರಿ ಕಮೆಂಟ್ ಹಾಕುತ್ತಿರುವ ಕಿಡಿಗೇಡಿಯ ವಿರುದ್ಧ ಕಾನೂನು ಸಮರಕ್ಕಿಳಿದಿದ್ದಾರೆ.
ಪರಿಚಿತ ವ್ಯಕ್ತಿಯಿಂದಲೇ ನಕಲಿ ಖಾತೆಗಳ ಜಾಲ!
ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಇತರೆ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಗೆ ಸಾಲು ಸಾಲು ಅಸಹ್ಯಕರ ಕಮೆಂಟ್‌ಗಳು ಬರುತ್ತಿರುವ ಬಗ್ಗೆ ಬೇಸತ್ತಿರುವ ಐಶ್ವರ್ಯ ಸಿಂದೋಗಿ, ಈ ಕೃತ್ಯದ ಹಿಂದೆ ತಮಗೆ ಮುಂಚಿನಿಂದಲೂ ಪರಿಚಯವಿರುವ ವ್ಯಕ್ತಿಯೊಬ್ಬನ ಕೈವಾಡವಿದೆ ಎಂದು ದೂರಿನಲ್ಲಿ ಸ್ಪಷ್ಟವಾಗಿ ಹೆಸರಿಸಿದ್ದಾರೆ. ಈ ಹಿಂದೆ ಕೂಡ ಇದೇ ವ್ಯಕ್ತಿ ನಟಿಗೆ ಬೆದರಿಕೆ ಹಾಕಿದಾಗ ಪೊಲೀಸ್ ದೂರು ದಾಖಲಾಗಿತ್ತು. ಆದರೆ, ಅದರಿಂದ ಪಾಠ ಕಲಿಯದ ಆತ, ಈಗ ಸಾಲು ಸಾಲು ನಕಲಿ ಖಾತೆಗಳನ್ನು ತೆರೆದು ಅವುಗಳ ಮೂಲಕ ನಟಿಯ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾನೆ. ಈ ಎಲ್ಲಾ ನಕಲಿ ಪ್ರೊಫೈಲ್‌ಗಳ ಜಾಲವನ್ನು ಭೇದಿಸಿ, ತಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯನ್ನು ತಕ್ಷಣವೇ ಬಂಧಿಸಬೇಕೆಂದು ನಟಿ ಆಗ್ರಹಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಸೈಬರ್ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕಠಿಣ ಶಿಕ್ಷೆಯಾಗಿದ್ದರೂ ನಿಲ್ಲದ ಆನ್‌ಲೈನ್ ದೌರ್ಜನ್ಯ ಇತ್ತೀಚಿನ ದಿನಗಳಲ್ಲಿ ನಟಿಯರ ಖಾಸಗಿ ಜೀವನ ಹಾಗೂ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ಕೆಟ್ಟದಾಗಿ ಕಮೆಂಟ್ ಮಾಡುವುದು ಹೆಚ್ಚಾಗುತ್ತಿದೆ. ರಮ್ಯಾ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರ ಪ್ರಕರಣಗಳಲ್ಲಿ ಸೈಬರ್ ಕ್ರೈಮ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಸೋಷಿಯಲ್ ಮೀಡಿಯಾದಲ್ಲಿ ನಿಂದಿಸಿದ್ದ ಕಿಡಿಗೇಡಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಸೈಬರ್ ಕಾಯ್ದೆಯಡಿ ಕಠಿಣ ಕ್ರಮ ಜರುಗುತ್ತಿದ್ದರೂ, ನಕಲಿ ಖಾತೆಗಳ ಹಿಂದೆ ಅಡಗಿ ಕುಳಿತು ನಟಿಯರ ಮಾನಹಾನಿ ಮಾಡುವ ವಿಕೃತರ ಸಂಖ್ಯೆ ಕಡಿಮೆಯಾಗದಿರುವುದು ಆತಂಕಕಾರಿ ಸಂಗತಿಯಾಗಿದೆ.