2026-05-28 10:23:56

ಸಿಎಂ ಬದಲಾವಣೆಯಿಂದ ರಾಜ್ಯಕ್ಕೆ ಲಾಭ ಇಲ್ಲ;ಬಿಜೆಪಿ ಆರೋಪ |Speed News Kannada

ಸಿಎಂ ಬದಲಾವಣೆಯಿಂದ ರಾಜ್ಯಕ್ಕೆ ಲಾಭ ಇಲ್ಲ;ಬಿಜೆಪಿ ಆರೋಪ |Speed News Kannada

 

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಿಂದ ಕನ್ನಡಿಗರಿಗೆ ನಯಾಪೈಸೆ ಲಾಭ ಇಲ್ಲ. ಹಾಗಾಗಿ, ಆದಷ್ಟು ಬೇಗ ಈ ಜನವಿರೋಧಿ ಸರ್ಕಾರ ತೊಲಗಿದರೆ ಕನ್ನಡಿಗರಿಗೆ ನೆಮ್ಮದಿಯ ದಿನ ಸಿಗಲಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. 
ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ರಾಜ್ಯ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಹರಿಹಾಯ್ದಿದೆ. 
ಕರ್ನಾಟಕ ಕಾಂಗ್ರೆಸ್ಸಿನ ಕುರ್ಚಿ ಕಚ್ಚಾಟದ ಪ್ರಹಸನಕ್ಕೆ ತಾತ್ಕಾಲಿಕ ಅಂತ್ಯ ದೊರೆತಿದೆ. ಆದರೆ ಇದರಿಂದ ಕನ್ನಡಿಗರಿಗೆ ನಯಾಪೈಸೆ ಪ್ರಯೋಜನ ಇಲ್ಲ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೂರು ವರ್ಷಗಳ ಸಾಧನೆ ಎಂದರೆ ಅದು ದಲಿತರ ಹಣ ದುರ್ಬಳಕೆ, ವಾಲ್ಮೀಕಿ ನಿಗಮದ ಹಣ ಲೂಟಿ, ಯುವಕರಿಗೆ ಟೋಪಿ, ರೈತರಿಗೆ ನೇಣು ಕುಣಿಕೆ, ಜನಸಾಮಾನ್ಯರಿಗೆ ಬೆಲೆ ಏರಿಕೆ, ಕರ್ನಾಟಕಕ್ಕೆ ಸಾಲದ ಶೂಲ ಹೊದಿಕೆ.
ಕರ್ನಾಟಕದ ಅಭಿವೃದ್ಧಿಯನ್ನು ಸಂಪೂರ್ಣ ಸ್ತಬ್ಧಗೊಳಿಸಿ, ಕಲೆಕ್ಷನ್‌-ಕರಪ್ಷನ್‌-ಕಮಿಷನ್‌ನಲ್ಲಿಯೇ ಮೂರು ವರ್ಷ ದೂಡಿ, ಈಗ ರಾಜೀನಾಮೆ ಎಂಬ ಅಲ್ಪ ವಿರಾಮ ಇಟ್ಟಿದ್ದಾರೆ.
ನೂತನವಾಗಿ ಯಾರೇ ಸಿಎಂ ಆಗಿ ಬಂದರೂ, ಕನ್ನಡಿಗರಿಗಾಗಲಿ, ಕರ್ನಾಟಕಕ್ಕಾಗಲಿ ನಯಾಪೈಸೆ ಪ್ರಯೋಜನ ಇಲ್ಲ. ಬಡವರು, ಶ್ರಮಿಕರು, ರೈತರು, ಯುವಕರು, ಮಹಿಳೆಯರು, ದೀನ-ದಲಿತರು, ಹಿಂದುಳಿದವರನ್ನು ಹಿಂಸಿಸಿ, ಶೋಷಿಸಿ ಸರ್ಕಾರ ನಡೆಸುವ ಇವರ ಪ್ರವೃತ್ತಿ ಮುಂದುವರೆಯುತ್ತದೆ ಹೊರತು ಬದಲಾಗುವುದಿಲ್ಲ. ಕರ್ನಾಟಕವನ್ನು ಸಂಪೂರ್ಣ ದಿವಾಳಿ ಮಾಡುವುದು ಹಾಗೂ ಕಾಂಗ್ರೆಸ್‌ ಹೈಕಮಾಂಡಿಗೆ ಕರ್ನಾಟಕವನ್ನು ಎಟಿಎಂ ಮಾಡುವುದು ಎರಡೇ ಇವರ ಅಜೆಂಡಾ. ಹಾಗಾಗಿ, ಆದಷ್ಟು ಬೇಗ ಈ ಜನವಿರೋಧಿ ಸರ್ಕಾರ ತೊಲಗಿದರೆ ಕನ್ನಡಿಗರಿಗೆ ನೆಮ್ಮದಿಯ ದಿನ ಸಿಗಲಿದೆ ಎಂದು ಹೇಳಿದೆ.

Share:


Tags:

bjp congress

Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.