ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಗೆ ಇನ್ನೂ ಒಂದು ವರ್ಷ ಜೈಲು ಶಿಕ್ಷೆ ಕಾಯಂ ಆಗಿದೆ. ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಸದ್ಯಕ್ಕೆ ಜಾಮೀನು ನೀಡಲು ನಿರಾಕರಿಸಿದೆ. ಈ ಮೂಲಕ ಹಿನ್ನೆಡೆ ಅನುಭವಿಸಿರುವ ಅವರು ಜೈಲಿನಲ್ಲಿಯೇ ಕಾಲ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ಸುಪ್ರೀಂಕೋರ್ಟ್ ಪೀಠವು ಪ್ರಕರಣದ ವಿಚಾರಣೆ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಒಟ್ಟು 272 ಸಾಕ್ಷಿಗಳಿದ್ದು, ಕಳೆದ 7 ತಿಂಗಳಲ್ಲಿ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆಸಿರುವುದಕ್ಕೆ ಗರಂ ಆಗಿದೆ. ಹೀಗೆ ವಿಚಾರಣೆ ನಡೆದರೆ ಪ್ರಕರಣ ಮುಕ್ತಾಯಗೊಳಿಸುವುದು ಯಾವಾಗ ಎಂದು ಪ್ರಶ್ನಿಸಿದೆ.
ಮುಂದಿನ ವರ್ಷ ಅಂದರೆ 2027ರ ಮೇ 15ರ ಒಳಗಾಗಿ ಈ ಪ್ರಕರಣದ ಸಂಪೂರ್ಣ ವಿಚಾರಣೆಯನ್ನು ಮುಗಿಸಬೇಕು ಮತ್ತು ಪ್ರತಿದಿನ ವಿಚಾರಣೆ ನಡೆಸಬೇಕು ಎಂದು ಸೂಚಿಸಿದೆ.
ಈ ಗಡುವಿನ ನಂತರವೇ ಸುಪ್ರೀಂಕೋರ್ಟ್ ಜಾಮೀನು ಅರ್ಜಿಯನ್ನು ಮರು ಪರಿಗಣಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್ ನಿಂದ ಸಾಮಾನ್ಯ ಸೆಲ್‌ಗೆ ಸ್ಥಳಾಂತರಿಸುವ ಬಗ್ಗೆ ದರ್ಶನ್ ಪರ ವಕೀಲರು ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ಸುಪ್ರೀಂಕೋರ್ಟ್ ಯಾವುದೇ ಆದೇಶ ನೀಡಿಲ್ಲ. ಹೀಗಾಗಿ ದರ್ಶನ್ ಕ್ವಾರಂಟೈನ್ ಸೆಲ್‌ನಲ್ಲೇ ಇರಬೇಕಾಗಿದೆ.
ಈ ಆದೇಶದಿಂದ ದರ್ಶನ್ ಅಭಿಮಾನಿಗಳಿಗೆ ನಿರಾಶೆಯಂತೂ ಆಗಿದೆ.