2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 9ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡುತಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನು ನಿರ್ಮಲಾ ಸೀತಾರಾಮನ್ ನಿರ್ಮಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಂತೆ, ಈ ವರ್ಷದ ಬಜೆಟ್ ಅನ್ನು ಕಾಗದರಹಿತ ಸ್ವರೂಪದಲ್ಲಿ ಮಂಡಿಸಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಸೀತಾರಾಮನ್ ತಮಿಳುನಾಡಿನ ಕಾಂಜೀವರಂ ರೇಷ್ಮೆ ಸೀರೆಯುಟ್ಟು ಬಂದಿರುವುದು ವಿಶೇಷ.
2019 ರಲ್ಲಿ ಸೀತಾರಾಮನ್ ತಮ್ಮ ಮೊದಲ ಬಜೆಟ್ ಮಂಡಿಸಿದಾಗ, ಅವರು ಚರ್ಮದ ಬ್ರೀಫ್‌ಕೇಸ್ ಬದಲಿಗೆ ಕೆಂಪು ಬಟ್ಟೆಯಲ್ಲಿ ಸುತ್ತಿದ ಸಾಂಪ್ರದಾಯಿಕ ಲೆಡ್ಜರ್ ಅನ್ನು ತಂದಿದ್ದರು. 2017ರಿಂದ, ಫೆಬ್ರವರಿ 1ರಂದು ಬಜೆಟ್ ಮಂಡಿಸುವ ಪದ್ಧತಿ ಚಾಲ್ತಿಯಲ್ಲಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ, ಕೇಂದ್ರ ಬಜೆಟ್ ಅನ್ನು ಭಾನುವಾರದಂದು ಮಂಡಿಸಲಾಗುತ್ತಿದೆ. ಮೇಘಾ ರಘು ದಾಸ್ ಜಯಂತಿಯ ಶುಭಾಶಯದೊಂದಿಗೆ ನಿರ್ಮಲಾ ಸೀತಾರಮನ್ ಬಜೆಟ್ ಆರಂಭ ಮಾಡಿದ್ದಾರೆ.
ಇದುವರೆಗೂ ತಾವು ಮಂಡಿಸಿದ ಬಜೆಟ್‌ಗಳಲ್ಲಿ ವಿಭಿನ್ನ ಬಗೆಯ, ಕಲಾಕುಸುರಿಯ ವಿಶೇಷತೆ ಇರುವ ಸೀರೆಗಳನ್ನುಟ್ಟು ನಿರ್ಮಲಾ ಸೀತಾರಾಮನ್ ಗಮನ ಸೆಳೆದಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಸೀತಾರಾಮನ್ ತಮಿಳುನಾಡಿನ ಕಾಂಜೀವರಂ ರೇಷ್ಮೆ ಸೀರೆಯಲ್ಲಿ ಮಿಂಚಿದ್ದಾರೆ. ತಮಿಳುನಾಡಿನ ಪ್ರಾಚೀನ ನೇಯ್ಗೆ ಪರಂಪರೆಯನ್ನು ಗೌರವಿಸುವ ಸಲುವಾಗಿ ಕೈಯಿಂದ ನೇಯ್ದ ಕಾಂಜೀವರಂ ರೇಷ್ಮೆ ಸೀರೆಯನ್ನು ಉಟ್ಟುಕೊಂಡಿದ್ದಾರೆ. ನೇರಳೆ ಬಣ್ಣದ ಸೀರೆಯಲ್ಲಿ ಚಿನ್ನದ ಬಣ್ಣದ ಗೆರೆ ಹಾಗೂ ಕಾಫಿ ಬಣ್ಣದ ದಡಿಯನ್ನು ಹೊಂದಿರುವ ಕಾಂಜೀವರಂ ರೇಷ್ಮೆ ಸೀರೆಯನ್ನು ಆರಿಸಿಕೊಂಡಿದ್ದು, ಇದನ್ನು ತಮಿಳಿನಲ್ಲಿ `ಕಟ್ಟಂ’ ಎಂದು ಕರೆಯಲಾಗುತ್ತದೆ.