ದೆಹಲಿ: ವೈದ್ಯಕೀಯ ಪದವಿ ಕೋರ್ಸ್ ಗಳ ಪ್ರವೇಶದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್-ಯುಜಿ) ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ನಡೆಸಲು ತೀರ್ಮಾನಿಸಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ನಡೆದ ಬೆನ್ನಲ್ಲೇ ನೀಟ್ ಪರೀಕ್ಷೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಕೇಂದ್ರ ಶಿಕ್ಷಣ ಸಚಿವಾಲಯ ಈ ತೀರ್ಮಾನ ಕೈಗೊಂಡಿದೆ.
ನವದೆಹಲಿಯಲ್ಲಿ ಇಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಪೇಪರ್-ಪೆನ್ ಬಳಸಿ ನಡೆಸುವ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಐಐಟಿ-ಜೆಇಇ ಮಾದರಿಯಲ್ಲಿಯೇ ನೀಟ್ ಪರೀಕ್ಷೆಗೂ ಡಿಜಿಟಲ್ ರೂಪ ಅಳವಡಿಸಿಕೊಳ್ಳಲಾಗುತ್ತದೆ. ವೈದ್ಯಕೀಯ ಪದವಿ ಕೋರ್ಸ್ ಗಳ ಪ್ರವೇಶದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್-ಯುಜಿ) ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ನಡೆಸಲು ತೀರ್ಮಾನಿಸಿದೆ. ಎನ್‌ಟಿಎ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ರಾಧಾಕೃಷ್ಣನ್ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ವಿವರಿಸಿದರು.
ನೀಟ್ ಮಾಫಿಯಾಗೆ ಶಿಕ್ಷೆ ಖಚಿತ:
ನೀಟ್ ಪರೀಕ್ಷೆಯಲ್ಲಿ ನಡೆಯುತ್ತಿರುವ ಅಕ್ರಮಗಳ ವಿಷಯದಲ್ಲಿ ನಾವು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಇದರಿಂದ ಮಕ್ಕಳು ತಮ್ಮ ಹಕ್ಕುಗಳಿಂದ ವಂಚಿರಾಗಲು ಬಿಡುವುದಿಲ್ಲ. ಪರೀಕ್ಷಾ ವ್ಯವಸ್ಥೆಯಲ್ಲಿ ಅಕ್ರಮ ಎಸಗುವವರ ವಿರುದ್ಧ ನಮ್ಮ ಸರ್ಕಾರವು ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಹೊಂದಿದೆ. ಪತ್ರಿಕೆ ಸೋರಿಕೆ ಮಾಡಿದ ‘ಮಾಫಿಯಾ’ಗಳು ಕಷ್ಟಪಟ್ಟು ಓದುವ ವಿದ್ಯಾರ್ಥಿಗಳ ಸೀಟುಗಳನ್ನು ಕಸಿಯಲು ಬಿಡುವುದಿಲ್ಲ. ಈ ಹಗರಣದ ಬೇರುಗಳನ್ನು ಪತ್ತೆಹಚ್ಚಲು ಸಿಬಿಐ ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದೂ ತಿಳಿಸಿದ್ದಾರೆ.
ನೀಟ್-ಯುಜಿ 2026ರ ಮರು ಪರೀಕ್ಷೆಯು ಜೂನ್ 21 ರಂದು ನಡೆಯಲಿದೆ. ಜೂನ್ 14 ರೊಳಗೆ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ವಿತರಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಲು ಒಂದು ವಾರ ಮುಂಚಿತವಾಗಿ ಅವಕಾಶ ನೀಡಲಾಗುತ್ತದೆ. ಮರು ಪರೀಕ್ಷೆಗೆ ಯಾವುದೇ ಶುಲ್ಕವಿರುವುದಿಲ್ಲ.