ಬೆಂಗಳೂರು: ಕರ್ನಾಟಕದ ಒಂದು ಲಕ್ಷ ವಿದ್ಯಾರ್ಥಿಗಳು ಸೇರಿದಂತೆ ದೇಶದ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು, ಬರೆದು ಮುಗಿಸಿದ NEET UG 2026 ಪರೀಕ್ಷೆಯನ್ನು ರದ್ದುಪಡಿಸಿರುವುದು ಕೇವಲ ಆಡಳಿತ ವೈಫಲ್ಯವಲ್ಲ , ಇದು ದೇಶದ ಯುವಜನತೆಯ ಕನಸುಗಳಿಗೆ ಮಾಡಿರುವ ಮಹಾವಂಚನೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ತಿಂಗಳುಗಟ್ಟಲೆ ಹಗಲು-ರಾತ್ರಿ ಶ್ರಮಿಸಿದ ವಿದ್ಯಾರ್ಥಿಗಳು, ಕೋಚಿಂಗ್, ಪ್ರಯಾಣ ಮತ್ತು ಇತರ ವೆಚ್ಚಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ ಪೋಷಕರು , ಎಲ್ಲರನ್ನೂ ಕೇಂದ್ರ ಸರ್ಕಾರ ಒಂದೇ ಹೊಡೆತದಲ್ಲಿ ಅನಿಶ್ಚಿತತೆ ಮತ್ತು ಆತಂಕದ ಕೂಪಕ್ಕೆ ತಳ್ಳಿದೆ.
2024ರಲ್ಲೇ ಕರ್ನಾಟಕ ಸರ್ಕಾರ NEET ವಿರುದ್ಧ ತನ್ನ ಗಂಭೀರ ಆಕ್ಷೇಪಣೆಗಳನ್ನು ದಾಖಲಿಸಿತ್ತು. ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಇದು ಅನ್ಯಾಯಕರ, ಶಾಲಾ ಶಿಕ್ಷಣದ ಮಹತ್ವವನ್ನು ಕುಗ್ಗಿಸುವ ವ್ಯವಸ್ಥೆ, ರಾಜ್ಯಗಳ ಹಕ್ಕನ್ನು ಕಸಿದುಕೊಳ್ಳುವ ಕ್ರಮ ಎಂದು ಎಚ್ಚರಿಸಿತ್ತು. ಇಂದಿನ ಪರೀಕ್ಷೆ ರದ್ದುಪಡಿಸಿರುವ ಘಟನೆ ನಮ್ಮ ಆತಂಕಗಳು ಎಷ್ಟು ನಿಜವಾಗಿದ್ದವು ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ಈ ಹಗರಣದ ಬಗ್ಗೆ ಪಾರದರ್ಶಕ ಹಾಗೂ ಸಮಯಬದ್ಧ ತನಿಖೆ ನಡೆಯಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಮರುಪರೀಕ್ಷೆಯ ವೇಳಾಪಟ್ಟಿಯನ್ನು ತಕ್ಷಣ ಪ್ರಕಟಿಸಬೇಕು. ಜೊತೆಗೆ ವೈದ್ಯಕೀಯ ಪ್ರವೇಶ ಪರೀಕ್ಷೆಗಳನ್ನು ನಡೆಸುವ ರಾಜ್ಯಗಳ ಹಕ್ಕನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.