2026-03-07 03:36:12

Mysuru Airport finally ready for expansion | ಮೈಸೂರು ಏರ್‌ಪೋರ್ಟ್ ವಿಸ್ತರಣೆಗೆ ಕೊನೆಗೂ ಸಿದ್ಧ ಭೂಸ್ವಾಧೀನ ಪ್ರಕ್ರಿಯೆ ಅಂತ್ಯ | Speed News Kannada

Mysuru Airport finally ready for expansion | ಮೈಸೂರು ಏರ್‌ಪೋರ್ಟ್ ವಿಸ್ತರಣೆಗೆ ಕೊನೆಗೂ ಸಿದ್ಧ ಭೂಸ್ವಾಧೀನ ಪ್ರಕ್ರಿಯೆ ಅಂತ್ಯ | Speed News Kannada

ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಕೊನೆಗೂ ಸದಾವಕಾಶ ಬಂದೊದಗಿದೆ. ಹಲವು ವರ್ಷಗಳಿಂದ ನಿಂತಲ್ಲೇ ನಿಂತಿದ್ದ ವಿಸ್ತರಣೆ ಮತ್ತು ಮೇಲ್ದರ್ಜೆಗೇರಿಸುವ ಯೋಜನೆ ಇದೀಗ ಮತ್ತೆ ಆರಂಭಕ್ಕೆ ಮುನ್ನುಡಿ ಇಟ್ಟಿದೆ.ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಭೂಸ್ವಾಧೀನ ಪ್ರಕ್ರಿಯೆ ಇದೀಗ ಪೂರ್ಣಗೊಂಡಿದ್ದು, ಈ ಹಿನ್ನೆಲೆ ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆ ಮತ್ತು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗೂ ವೇಗ ಪಡೆದುಕೊಳ್ಳಲಿದೆ.
ಇದೀಗ ವಿಸ್ತರಣೆ ಕಾಮಗಾರಿ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದೆ. ಇದರಿಂದ ಮೈಸೂರು ಸುತ್ತಮುತ್ತಲಿನ ಪ್ರದೇಶಗಳ ಸಂಪರ್ಕ, ಪ್ರವಾಸೋದ್ಯಮ ಮತ್ತು ಆರ್ಥಿಕ ಸ್ಥಿತಿಗೆ ಮತ್ತಷ್ಟು ಬೆಂಬಲ ಸಿಗುವ ಸಾಧ್ಯತೆ ಇದೆ.
ನೋಡಲ್ ಏಜೆನ್ಸಿಯಾದ ಕೆಎಸ್‌ಐಐಡಿಸಿ (ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ), ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿದೆ ಎಂದು ಖಚಿತಪಡಿಸಿಕೊಂಡ ನಂತರ, ಇದೀಗ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (AAI) ಹಸ್ತಾಂತರಿಸುವ ನಿರೀಕ್ಷೆಯಿದೆ.
ಮೈಸೂರು ಅಲ್ಲ, ಗ್ರೇಟರ್ ಮೈಸೂರು!
ಮೈಸೂರು ಇನ್ನೇಲೆ ಗ್ರೇಟರ್ ಮೈಸೂರು ಆಗಿ ವಿಸ್ತರಿಸಲ್ಪಟ್ಟಿದ್ದು ಮತ್ತು ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಯೊಂದಿಗೆ ಮೈಸೂರು ಹೆಚ್ಚಿನ ಹೂಡಿಕೆದಾರರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಸಾಧ್ಯತೆಯಿದೆ. ಇನ್ನು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ 240 ಎಕರೆ ಭೂಮಿಯ ಅಗತ್ಯವಿದ್ದು, ಕೆಐಎಡಿಬಿ 206.12 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಇನ್ನುಳಿದದ್ದು ಸರ್ಕಾರಿ ಭೂಮಿಯಾಗಿದೆ.
ಕೆಐಎಡಿಬಿಯ ವಿಶೇಷ ಭೂಸ್ವಾಧೀನ ಅಧಿಕಾರಿ (SLO) ಎನ್.ಸಿ ವೆಂಕಟರಾಜು ಅವರು ಈ ಕುರಿತು ಮಾತನಾಡಿದ್ದು, 206.12 ಎಕರೆ ಭೂಮಿಯಲ್ಲಿ 181.12 ಎಕರೆ ಭೂಮಿಯನ್ನು ಭೂಮಾಲೀಕರ ಒಪ್ಪಿಗೆಯೊಂದಿಗೆ ಪಡೆದುಕೊಳ್ಳಲಾಗಿದೆ. ಇನ್ನುಳಿದ 18 ಎಕರೆ ಭೂಮಿಗೆ, ಮರಗಳು ಮತ್ತು ರಚನೆಗಳಿಗೆ ಪರಿಹಾರದ ನೀಡುವ ಉದ್ದೇಶದಿಂದ ಕೆಐಎಡಿಬಿಯ ಪ್ರಧಾನ ಕಚೇರಿಗೆ ಪತ್ರ ಬರೆಯಲಾಗಿದೆ. ಎಲ್ಲಾ ಪರಿಹಾರ ಪ್ರಕ್ರಿಯೆ ಮುಗಿದ ನಂತರ, ಭೂಮಿಯನ್ನು ಎಎಐಗೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಿದ್ದಾರೆ.ಮೈಸೂರು ಅಭಿವೃದ್ಧಿಗೆ ವಿಶೇಷ ನಿರ್ಧಾರ!
ರನ್‌ವೇ ವಿಸ್ತರಣೆ: ಪ್ರಸ್ತುತ 1,740 ಮೀಟರ್ ಉದ್ದದ ರನ್‌ವೇಯನ್ನು ಮೊದಲ ಹಂತದಲ್ಲಿ 2,300 ರಿಂದ 2,750 ಮೀಟರ್‌ಗೆ ವಿಸ್ತರಿಸಲು ಪ್ಲಾನ್ ಮಾಡಲಾಗಿದೆ ಎಂದು ಹೇಳಲಾಗಿದೆ. ಇನ್ನು ಈ ವಿಸ್ತರಣೆಯಿಂದ ATR-72 ರಂತಹ ಚಿಕ್ಕ ವಿಮಾನಗಳ ಜೊತೆಗೆ ಬೋಯಿಂಗ್ 737 ಮತ್ತು ಏರ್‌ಬಸ್ A320 ಯಂತಹ ದೊಡ್ಡ ದೊಡ್ಡ ಜೆಟ್ ವಿಮಾನಗಳು ಸಹ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಕ್ಟೋಬರ್ 6, 2025 ರಂದು ವಿಮಾನ ನಿಲ್ದಾಣದ ಮಾಸ್ಟರ್ ಪ್ಲಾನ್ ಅನ್ನು ದೃಢಪಡಿಸಿದೆ. ಭೂಮಿಯನ್ನು ಹಸ್ತಾಂತಿಸಿದ ಬೆನ್ನಲ್ಲೇ, ನಂತರ ಡಿಪಿಆರ್ ನಿರ್ಧಾರವಾಗಲಿದೆ. ಆ ಬಳಿಕ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿದೆ. ಅಂತೂ ಇದೀಗ ಹಲವು ದಿನಗಳ ಕನಸು ಇದೀಗ ಕೊನೆಗೂ ನೆರವೇರುವ ಕಾಲ ಬಂದಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.