ನವದೆಹಲಿ: ಕಳೆದ 11 ವರ್ಷಗಳಲ್ಲಿ ಪ್ರಧಾನಿ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರಿಗೆ ವಿಧಿಸುವ ಮೂಲಕ ರೂ.43 ಲಕ್ಷ ಕೋಟಿ ಸಂಗ್ರಹಿಸಿದೆ. ಇದು 2014 ರಿಂದ ಪ್ರತಿ ದಿನಕ್ಕೆ ರೂ.1,000 ಕೋಟಿಯಾಗುತ್ತದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಡೀಸೆಲ್, ಪೆಟ್ರೋಲ್, ಸಿಎನ್ ಜಿ, ಅಡುಗೆ ಅನಿಲ ಬೆಲೆ ಏರಿಕೆ ಕುರಿತು ಅವರು ಪ್ರಧಾನಿ ಮೋದಿ ಆಧಿಕಾರ ಹಿಡಿದ 2014 ರಿಂದ ಈವರೆಗೆ ಬೆಲೆ ಏರಿಕೆಯ ವಿವರ ಹಂಚಿಕೊಂಡಿದ್ದಾರೆ.
ಮೇ 26, 2014 ರಂದು (ಕಾಂಗ್ರೆಸ್-ಯುಪಿಎ ಅವಧಿಯಲ್ಲಿ) ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ₹ 71.41 ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ₹ 56.71 ಇತ್ತು. ಇಂದು, ಪೆಟ್ರೋಲ್ ಪ್ರತಿ ಲೀಟರ್‌ಗೆ ₹ 102.92 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ₹ 90.99 ಕ್ಕೆ ಮಾರಾಟವಾಗುತ್ತಿದೆ. ಇದು ಲೂಟಿಗೆ ಬಿಜೆಪಿ ಕಂಡುಕೊಂಡ ಮಾರ್ಗವಾಗಿದೆ.
2014 ರಿಂದ 2025 ರವರೆಗೆ, ಮೋದಿ ಸರ್ಕಾರವು ಪೆಟ್ರೋಲ್ ಮೇಲೆ ಸರಾಸರಿ ರೂ.21.60 ಮತ್ತು ಡೀಸೆಲ್ ಮೇಲೆ ₹12.80 ಅಬಕಾರಿ ಸುಂಕವನ್ನು ವಿಧಿಸಿದೆ. ಇದು ಸಾಮಾನ್ಯ ಭಾರತೀಯರು ಪೆಟ್ರೋಲ್ ಬೆಲೆಯ 23.3% ಮತ್ತು ಡೀಸೆಲ್ ಬೆಲೆಯ 21.4% ರಷ್ಟನ್ನು ಮೋದಿ ಸರ್ಕಾರದ ಬೊಕ್ಕಸಕ್ಕೆ ನೀಡುವಂತೆ ಮಾಡಿದೆ, ಅಂದರೆ ಅಗತ್ಯ ಇಂಧನವನ್ನು ಲಾಭ ಗಳಿಸುವ ಸಾಧನವಾಗಿ ಪರಿವರ್ತಿಸಲಾಗಿದೆ.
ಎಲ್‌ಪಿಜಿ (LPG) ಸಿಲಿಂಡರ್ ಬೆಲೆ ಮೇ 2014 ರಲ್ಲಿ (ಯುಪಿಎ ಅಡಿಯಲ್ಲಿ) ₹414 ಇದ್ದದ್ದು, ಮಾರ್ಚ್ 2026 ರಲ್ಲಿ (ಎನ್‌ಡಿಎ ಅಡಿಯಲ್ಲಿ) ₹915.5 ಕ್ಕೆ ಏರಿದೆ. ಅಂದರೆ ಕಳೆದ 12 ವರ್ಷಗಳಲ್ಲಿ ₹501.5 (121.6%) ಹೆಚ್ಚಳವಾಗಿದೆ. ಅಂತರಾಷ್ಟ್ರೀಯ ಎಲ್‌ಪಿಜಿ ಬೆಲೆ ಕುಸಿದಿದ್ದರೂ ಭಾರತದಲ್ಲಿ ಮಾತ್ರ ಬೆಲೆ ಗಗನಕ್ಕೇರಿದೆ.
ಪ್ರತಿ ಬಾರಿ ಚುನಾವಣೆಗಳು ಮುಗಿದ ತಕ್ಷಣ ಪೆಟ್ರೋಲ್-ಡೀಸೆಲ್-ಗ್ಯಾಸ್ ಬೆಲೆಗಳನ್ನು ಏರಿಸುವುದು ಬಿಜೆಪಿ ಸರ್ಕಾರದ ಕುತಂತ್ರದ ಯೋಜನೆಯಾಗಿದೆ ಎಂದು ದೂರಿದ್ದಾರೆ.