ರಾಜಕೀಯ ಚದುರಂಗದಾಟದಲ್ಲಿ ಏರಿಳಿತ ಸರ್ವೇ ಸಾಮಾನ್ಯ. ಆದ್ರೆ, ಈ ಎಲ್ಲಾ ಅಡೆ-ತಡೆಗಳನ್ನ ಮೀರಿ ಪ್ರಧಾನಿ ನರೇಂದ್ರ ಮೋದಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಮೋದಿ ದೇಶದ ಪ್ರಧಾನಿಯಾಗಿ 8931 ದಿನಗಳ ಕಾಲ ಅಧಿಕಾರದಲ್ಲಿದ್ದು, ಮಾರ್ಚ್ 22 ರ ಭಾನುವಾರದಂದು ಭಾರತದ ಅತೀ ಸುದೀರ್ಘಾವಧಿ ಸೇವೆ ಸಲ್ಲಿಸಿದ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಈ ಮೂಲಕ ಸಿಕ್ಕಿಂನ ಮಾಜಿ ಸಿಎಂ ಪವನ್‌ಕುಮಾರ್ ಚಾಮ್ಲಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ.
2001ರಿಂದ 2014ರವರೆಗೆ ಗುಜರಾತ್ ಸಿಎಂ ಆಗಿ ಕಾರ್ಯನಿರ್ವಹಿಸುವ ಮೂಲಕ ಗುಜರಾತ್‌ನಲ್ಲಿ ಅತೀ ಸುದೀರ್ಘಾವಧಿ ಸೇವೆ ಸಲ್ಲಿಸಿದ್ದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ನರೇಂದ್ರ ಮೋದಿಯವರು ಈಗ 8931 ದಿನಗಳ ಕಾಲ ಅಧಿಕಾರದಲ್ಲಿದ್ದು ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ ಅತೀ ಅಧಿಕಾರದಲ್ಲಿದ್ದ ಸರ್ಕಾರದ ಅತೀ ಸುದೀರ್ಘಾವಧಿಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ಸಿಕ್ಕಿಂನ ಸಿಎಂ ಆಗಿ 8930 ದಿನಗಳ ಕಾಲ ಸೇವೆ ಸಲ್ಲಿಸಿದ್ದ ಪವನ್‌ಕುಮಾರ್ ಚಾಮ್ಲಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಈ ಮೈಲಿಗಲ್ಲು ಭಾರತೀಯ ರಾಜಕೀಯದಲ್ಲಿ ಅಪರೂಪದ ಸಾಧನೆಯಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ, ಪ್ರಧಾನಿ ಮೋದಿ ಹಲವಾರು ಗಮನಾರ್ಹ ದಾಖಲೆಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಗುಜರಾತ್‌ನ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸಿಎಂ ಹಾಗೂ ಮುಖ್ಯಮಂತ್ರಿಯಾಗಿ ದೀರ್ಘಾವಧಿಯ ಹಿಂದಿನ ಅನುಭವ ಹೊಂದಿರುವ ಪ್ರಧಾನಿ ಎಂಬ ಹೆಗ್ಗಳಿಕೆಯೂ ಸೇರಿದೆ. ಇದರ ಜೊತೆಗೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಜನಿಸಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ ಮತ್ತು 2014, 2019 ಮತ್ತು 2024 ರಲ್ಲಿ ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಅವರು ಜಯಗಳಿಸಿದ್ದಾರೆ.
ಇಂದಿರಾ ಗಾಂಧಿ 1966 ಜನವರಿ 24ರಿಂದ 1977ರ ಮಾರ್ಚ್ 24ರವರೆಗೆ ಅಂದ್ರೆ 4,077 ದಿನ ಪ್ರಧಾನಮಂತ್ರಿಯಾಗಿದ್ರು. ಮೋದಿಯವ್ರು 2025ರ ಜುಲೈನಲ್ಲಿ ಇಂದಿರಾ ಗಾಂದಿಯವ್ರ ದಾಖಲೆ ಮುರಿದು ನಂತರ ಅವಧಿಯಲ್ಲಿ ಸೇವೆ ಸಲ್ಲಿಸಿದ 2ನೇ ದೀರ್ಘಕಾಲದ ಪ್ರಧಾನಿಯಾಗಿದ್ದಾರೆ. ಅಷ್ಟೇ ಅಲ್ಲದೇ ಈ ವರ್ಷದ ಫೆಬ್ರವರಿಯಲ್ಲಿ, ಪ್ರಧಾನಿ ಮೋದಿ ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್‌ಗಳನ್ನು ಗಳಿಸಿದ್ದು, ಇನ್ಸ್ಟಾಗ್ರಾಮ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ನಾಯಕ ಮತ್ತು ರಾಜಕಾರಣಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.