ಬೆಂಗಳೂರು: ಬೇಲಿಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರು ರಫ್ತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್ ಇಂದು ವೈದ್ಯಕೀಯ ಕಾರಣ ನೀಡಿ ಸತೀಶ್ ಸೈಲ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು.
ಲಿವರ್ ಕಸಿ ಮಾಡಿಸಬೇಕಿರುವುದರಿಂದ ಜಾಮಿನು ನೀಡಲಾಗುತ್ತಿದೆ. ಲಿವರ್ ಕಸಿ ಕುರಿತು ಎರಡು ವಾರಕ್ಕೊಮ್ಮೆ ವರದಿ ಸಲ್ಲಿಸಬೇಕು. ಎಂಟು ವಾರಗಳಿಗೊಮ್ಮೆ ಆರೋಗ್ಯದ ಸ್ಥಿತಿಗತಿ ಬಗ್ಗೆ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂಬ ನಿರ್ದೇಶನ ನೀಡಿ, ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಾಸಿಕ್ಯೂಷನ್ ಸಾಕ್ಷ್ಯದ ಮೇಲೆ ಪ್ರಭಾವ ಬೀರಬಾರದು. ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತೊಂದರೆ ಉಂಟು ಮಾಡಬಾರದು. ಐದು ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಒಂದು ಭದ್ರತಾ ಖಾತರಿ ಒದಗಿಸಬೇಕು ಎಂಬ ಷರತ್ತುಗಳನ್ನೂ ಹೈಕೋರ್ಟ್ ವಿಧಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಬೇಲಿಕೇರಿ ಬಂದರಿನಲ್ಲಿ ಜಪ್ತಿ ಮಾಡಿ ಸಂಗ್ರಹಿಸಲಾಗಿದ್ದ ಸಾವಿರಾರು ಟನ್‌ಗಳಷ್ಟು ಕಬ್ಬಿಣದ ಅದಿರನ್ನು ಕದ್ದು, ಅಕ್ರಮವಾಗಿ ಸಾಗಣೆ ಮಾಡಿದ ಪ್ರಕರಣದಲ್ಲಿ ಶಾಸಕ ಸತೀಶ್ ಸೈಲ್‌ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಏಳು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಇಡಿ ತನಿಖೆ ಆರಂಭಿಸಿ ಕಳೆದ ವರ್ಷ ಆಗಸ್ಟ್ ನಲ್ಲಿ ಸತೀಶ್ ಅವರ ಕಾರವಾರ ಮತ್ತು ಬೆಂಗಳೂರಿನ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ರೂ.13 ಕೋಟಿಯಷ್ಟು ನಗದು ಮತ್ತು ಚಿನ್ನಾಭರಣ ವಶಕ್ಕೆ ಪಡೆದಿತ್ತು.