ಗಾಂಧಿನಗರ: ಗುಜರಾತ್‌ನ ಆನಂದ್ ಜಿಲ್ಲೆಯ ವಾಸದ್ ರೈಲು ನಿಲ್ದಾಣದಲ್ಲಿ ನಾಲ್ಕು ವರ್ಷದ ಬಾಲಕಿಯ ಅಪಹರಣ, ಕೊಲೆ ಹಾಗೂ ಲೈಂಗಿಕ ದೌರ್ಜನ್ಯ ಶಂಕೆ ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಪರಮಾರ್ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾನೆ. ಪೊಲೀಸ್ ವಶದಲ್ಲಿದ್ದಾಗಲೇ ಪರಾರಿಯಾಗಲು ಯತ್ನಿಸಿ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಹಿನ್ನೆಲೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದು, ಚಿಕಿತ್ಸೆ ವೇಳೆ ಆರೋಪಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಪರಮಾರ್‌ನನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬೋರ್ಸಾದ್ ಗ್ರಾಮೀಣ ಪೊಲೀಸರು ಬಂಧಿಸಿದ್ದರು. ಬಳಿಕ ಹೆಚ್ಚಿನ ವಿಚಾರಣೆಗಾಗಿ ಆತನನ್ನು ಆನಂದ್ ಸ್ಥಳೀಯ ಅಪರಾಧ ದಳಕ್ಕೆ ಒಪ್ಪಿಸಲಾಗಿತ್ತು. ವಿಚಾರಣೆಗಾಗಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿ ತನಗೆ ವಾಂತಿ ಬರುತ್ತಿದೆ ಎಂದು ಹೇಳಿದ್ದಾನೆ.
ಇದರಿಂದ ಪೊಲೀಸರು ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ. ಈ ವೇಳೆ ವಾಹನದಿಂದ ಕೆಳಗಿಳಿದ ಆರೋಪಿ ಏಕಾಏಕಿ ಚಾಕು ಹೊರತೆಗೆದು ಪೊಲೀಸರ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯಲ್ಲಿ ರಾಜವೀರ್‌ಸಿಂಗ್ ಹಾಗೂ ಮಹಿಪಾಲ್‌ಸಿಂಗ್ ಎಂಬ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಆರೋಪಿ ಚಾಕು ಬಿಸಾಡುವಂತೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರಾಣಾ ಹಲವು ಬಾರಿ ಎಚ್ಚರಿಕೆ ನೀಡಿದರೂ ಆತ ದಾಳಿ ಮುಂದುವರಿಸಿದ್ದಾನೆ ಎನ್ನಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಸುರೇಶ್ ಪರಮಾರ್‌ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಇಬ್ಬರು ಪೊಲೀಸ್ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣವು ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕೆಲವೇ ದಿನಗಳ ಹಿಂದೆ ಕುಟುಂಬದೊಂದಿಗೆ ವಾಸದ್ ರೈಲು ನಿಲ್ದಾಣಕ್ಕೆ ಬಂದಿದ್ದ ನಾಲ್ಕು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಶಾಶ್ವತ ನೆಲೆ ಇಲ್ಲದ ಕಾರಣ ಕುಟುಂಬ ರೈಲು ನಿಲ್ದಾಣದಲ್ಲೇ ತಂಗಿದ್ದು, ತ್ಯಾಜ್ಯ ಸಂಗ್ರಹಿಸಿ ಜೀವನ ನಡೆಸುತ್ತಿತ್ತು ಎಂದು ತಿಳಿದುಬಂದಿದೆ.
ಬಾಲಕಿ ಕಾಣೆಯಾಗಿದ್ದ ಕೆಲವೇ ಸಮಯದ ಬಳಿಕ ಆಕೆಯ ಮೃತದೇಹ ಪತ್ತೆಯಾಗಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಈ ಕುರಿತು ಅಂತಿಮ ದೃಢೀಕರಣ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಸಾಧ್ಯ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಭೀಕರ ಪ್ರಕರಣದ ತನಿಖೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ವರದಿಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.