ರಾಜಧಾನಿ ಬೆಂಗಳೂರಿನಲ್ಲಿ ಅಪ್ರಾಪ್ತ ಬಾಲಕ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಬೆಂಗಳೂರು ನಗರದ ಪೀಣ್ಯದ ಎಚ್‌ಎಂಟಿ ಲೇಔಟ್‌ನ ಮನೆಯೊಂದರಲ್ಲಿ ಈ ದುರ್ಘಟನೆ ನಡೆದಿದೆ. 16 ವರ್ಷದ ಅಪ್ರಾಪ್ತ ಬಾಲಕ, ತನ್ನ ತಾಯಿಯ ಅಕ್ರಮ ಸಂಬಂಧ ಪ್ರಶ್ನಿಸಲು ಬಂದ ಅಕ್ಕ ಮತ್ತು ತಮ್ಮನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಮೃತರನ್ನು ಯಮುನಾ (36) ಮತ್ತು ಸುದೀಪ್ (34) ಎಂದು ಗುರುತಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಡಿಸಿಪಿ ನಾಗೇಶ್ ಸೇರಿದಂತೆ ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿ ಬಾಲಕನ ತಾಯಿ ಛಾಯಾ ಹಾಗೂ ಕೊಲೆಯಾದ ಯಮುನಾ ಅವರ ಪತಿಯ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಪ್ರಶ್ನಿಸಲು ಯಮುನಾ ಮತ್ತು ಅವರ ತಮ್ಮ ಸುದೀಪ್ ಛಾಯಾ ಮನೆಗೆ ಬಂದಿದ್ದರು. ಈ ವೇಳೆ ಜಗಳ ತೀವ್ರಗೊಂಡಿದ್ದು, ಮಧ್ಯೆ ಪ್ರವೇಶಿಸಿದ ಅಪ್ರಾಪ್ತ ಬಾಲಕ ಕೋಪದಲ್ಲಿ ಇಬ್ಬರ ಮೇಲೂ ಹತ್ತಾರು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕ ಬಾಲಕ ಮನೆಯ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಪೊಲೀಸರು ಬಂದರೂ ಬಾಗಿಲು ತೆರೆಯದೇ ಇದ್ದ ಬಾಲಕ, ನಂತರ ತಂದೆಯ ಮಾತು ಕೇಳಿ ಹೊರಬಂದಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.