2026-06-08 03:55:29

Minister V Somanna | ಯಲಹಂಕದಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣ: ಸಚಿವ ವಿ ಸೋಮಣ್ಣ | Speed News Kannada

Minister V Somanna | ಯಲಹಂಕದಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣ: ಸಚಿವ ವಿ ಸೋಮಣ್ಣ | Speed News Kannada

ಬೆಂಗಳೂರು: ಯಲಹಂಕದಲ್ಲಿ ರೂ. 5754 ಕೋಟಿ ವೆಚ್ಚದಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣವಾಗಲಿದೆ ಎಂದು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಬೆಂಗಳೂರಿನ ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಯಲಹಂಕದಲ್ಲಿರೂ. 5754 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣವಾಗಲಿದೆ. ಇದು ಭಾರತದ ಅತಿದೊಡ್ಡ ಕೋಚಿಂಗ್ ಸೆಂಟರ್ ಆಗಲಿದೆ. ಆರಂಭದಲ್ಲಿ ದೇವನಹಳ್ಳಿಯಲ್ಲಿ ಪ್ರಸ್ತಾಪಿಸಲಾಗಿದ್ದ ಈ ಯೋಜನೆ, ದೂರದ ಕಾರಣ ಯಲಹಂಕಕ್ಕೆ ಸ್ಥಳಾಂತರಗೊಂಡಿದೆ. ರೈಲ್ವೆ ಮಂಡಳಿಯು ಯಲಹಂಕದಲ್ಲಿ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ 1370 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಗೆ ಶೀಘ್ರದಲ್ಲೇ ಅನುಮೋದನೆ ಸಿಗಲಿದೆ.  ಯಶವಂತಪುರ-ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳ ಆಧುನೀಕರಣಕ್ಕಾಗಿ ತಲಾ ರೂ.485-500 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.
ವೈಟ್‌ಫೀಲ್ಡ್‌ನಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದವರೆಗಿನ ನಾಲ್ಕು ಪಥದ ರೈಲ್ವೆ ಮಾರ್ಗ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ತುಮಕೂರು-ಬೆಂಗಳೂರು ನಾಲ್ಕು ಪಥದ ಯೋಜನೆಗೆ ಈಗಾಗಲೇ ಡಿಪಿಆರ್ ಸಿದ್ಧಪಡಿಸಿ ಸಚಿವ ಸಂಪುಟ ಒಪ್ಪಿಗೆಗೆ  ಸಲ್ಲಿಸಲಾಗಿದೆ. ವೈಟ್‌ಫೀಲ್ಡ್‌ನಿಂದ ಕೋಲಾರಕ್ಕೆ ನೇರ ರೈಲು ಸಂಪರ್ಕಕ್ಕಾಗಿ ಸಮೀಕ್ಷೆ ನಡೆಸಲು ಡಿಆರ್‌ಎಂ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮೈಸೂರು-ಕೆಎಸ್ಆರ್ ಬೆಂಗಳೂರು ಸಿಟಿ ಚಾಮುಂಡಿ ಎಕ್ಸ್‌ಪ್ರೆಸ್ (16215/16216), ಮೈಸೂರು-ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ (17307/17308), ತೂತ್ತುಕುಡಿ–ಮೈಸೂರು ಎಕ್ಸ್‌ಪ್ರೆಸ್ (16235/1 6236) ಮತ್ತು ಮೈಸೂರು-ಪಂಢರಪುರ ಗೋಲ್‌ ಗುಂಬಜ್‌ ಎಕ್ಸ್‌ಪ್ರೆಸ್ (16535/16535) ರೈಲುಗಳಿಗೆ ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಸಚಿವರು ಚಾಲನೆ ನೀಡಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.