2026-06-27 12:09:16

Minister Satish Jarkiholi | ಬಾಮೈದ ಮಂಜುನಾಥ್ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎನ್ನಲಾಗದು ಎಂದ ಸಚಿವ ಸತೀಶ್ ಜಾರಕಿಹೊಳಿ | SNK

Minister Satish Jarkiholi | ಬಾಮೈದ ಮಂಜುನಾಥ್ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎನ್ನಲಾಗದು ಎಂದ ಸಚಿವ ಸತೀಶ್ ಜಾರಕಿಹೊಳಿ | SNK

ಬೆಳಗಾವಿ: ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ.ವೈ.ಮಂಜುನಾಥ್ ಮನೆ ಮೇಲೆ ಜಾರಿ ನಿರ್ದೇಶನಾಲಯ- ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಇಡಿ ದಾಳಿಯನ್ನು ರಾಜಕೀಯ ಪ್ರೇರಿತ ಎನ್ನಲಾಗದು ಎಂದು ತಿಳಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಬೆಳಗಾವಿ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ವೈ.ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿರುವುದು ನಿಜ. ಅವರು ನಮ್ಮ ಸಂಬಂಧಿಯೂ ಹೌದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದನ್ನು ರಾಜಕೀಯ ಪ್ರೇರಿತ ದಾಳಿ ಎಂದು ಹೇಳಲು ಸಾಧ್ಯವಿಲ್ಲ ಎಂದರು.

ಮಂಜುನಾಥ್ ಅವರ ಮೇಲೆ ಇಷ್ಟು ದೊಡ್ಡ ಮಟ್ಟದಲ್ಲಿ ಇಡಿ ದಾಳಿ ನಡೆಸಿರುವುದು ಇದೇ ಮೊದಲು. ಈ ಬೆಳವಣಿಗೆ ನಮಗೂ ಕೂಡ ಆತಂಕ ಮೂಡಿಸಿದೆ. ಈ ಹಿಂದೆ 2011 ರಲ್ಲಿ ಅವರ ಮೇಲೊಂದು ಪ್ರಕರಣ ದಾಖಲಾಗಿತ್ತು, ಆದರೆ ಅದು ಈಗಾಗಲೇ ರದ್ದಾಗಿದೆ. ಈಗಿನ ದಾಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಏನು ಪ್ರಶ್ನೆ ಕೇಳುತ್ತಾರೆ, ಯಾವ ಮಾಹಿತಿ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇಂದು ನಾನು ಕೂಡ ಮಂಜುನಾಥ್ ಅವರ ಜೊತೆ ಮಾತನಾಡುತ್ತೇನೆ ಎಂದರು.

ನಮ್ಮನ್ನು ರಾಜಕೀಯವಾಗಿ ಕಟ್ಟಿ ಹಾಕಲು ಈ ದಾಳಿ ನಡೆಸಲಾಗುತ್ತಿದೆಯೇ ಎಂಬುದು ಈಗಲೇ ಗೊತ್ತಾಗುವುದಿಲ್ಲ. ಅದಕ್ಕೆ ಕನಿಷ್ಠ ಆರು ತಿಂಗಳು ಬೇಕಾಗುತ್ತದೆ. ಸದ್ಯಕ್ಕೆ ಏನೂ ಹೇಳಲಾಗದು. ಸಾಮಾನ್ಯವಾಗಿ 2028ರ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ಇಡಿ ದಾಳಿಗಳು ಆರಂಭವಾಗುವುದು ಸಹಜ ಎಂದರು. ಮಂಜುನಾಥ್ ಅವರ ಕುಟುಂಬಸ್ಥರು ಕಳೆದ 30 ವರ್ಷಗಳಿಂದ ಮದ್ಯದ ಅಂಗಡಿ ವ್ಯವಹಾರದಲ್ಲಿದ್ದಾರೆ. ಭ್ರಷ್ಟಾಚಾರದ ತನಿಖೆ ಕೇವಲ ಒಂದು ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ, ಈ ಪ್ರಕರಣ ಇಷ್ಟಕ್ಕೇ ಮುಗಿಯುವುದೂ ಇಲ್ಲ ಎಂದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.