2026-06-28 02:51:27

CT RAVI | ಪರಿಷತ್ ಅಡ್ಡ ಮತದಾನದ ತನಿಖಾ ವರದಿ ರೆಡಿ ಗೌಪ್ಯವಾಗಿ ಸೀಲ್ಡ್ ಕವ‌ರ್ನನಲ್ಲಿಟ್ಟ ಸಿ ಟಿ ರವಿ! | SNK

CT RAVI | ಪರಿಷತ್ ಅಡ್ಡ ಮತದಾನದ ತನಿಖಾ ವರದಿ ರೆಡಿ ಗೌಪ್ಯವಾಗಿ ಸೀಲ್ಡ್ ಕವ‌ರ್ನನಲ್ಲಿಟ್ಟ ಸಿ ಟಿ ರವಿ! | SNK

ಚಿಕಮಗಳೂರು : ಕರ್ನಾಟಕ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ರಚಿಸಿದ್ದ ಸತ್ಯಶೋಧನಾ ಸಮಿತಿಯು ತನ್ನ ಸಂಪೂರ್ಣ ವರದಿಯನ್ನು ಸಿದ್ದಪಡಿಸಿದೆ. ಈ ವರದಿಯನ್ನು ಸದ್ಯ ಅತ್ಯಂತ ಗೋಪ್ಯವಾಗಿ ಸೀಲ್ಡ್ ಕವರ್ನಲ್ಲಿ ಇಡಲಾಗಿದೆ ಎಂದು ಸತ್ಯಶೋಧನಾ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರಕಟಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ವರದಿ ಸಲ್ಲಿಕೆಯ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು. ಸದ್ಯ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ದೆಹಲಿ ಪ್ರವಾಸದಲ್ಲಿದ್ದು, ಅವರು ಬೆಂಗಳೂರಿಗೆ ಮರಳಿದ ತಕ್ಷಣ ಸಮಿತಿಯ ಮೂವರು ಸದಸ್ಯರು ಒಟ್ಟಾಗಿ ಹೋಗಿ ವರದಿಯನ್ನು ಹಸ್ತಾಂತರಿಸಲಿದ್ದಾರೆ. ಈ ವರದಿಯನ್ನು ಯಾವ ಆಧಾರದ ಮೇಲೆ ಮತ್ತು ಹೇಗೆ ಸಿದ್ದಪಡಿಸಲಾಗಿದೆ ಎಂಬ ಸಂಪೂರ್ಣ ವಿವರಣೆಯನ್ನು ನೀಡಿದ ಬಳಿಕವಷ್ಟೇ ಅದನ್ನು ಪಕ್ಷದ ಮುಖಂಡರಿಗೆ ಅಧಿಕೃತವಾಗಿ ಒಪ್ಪಿಸಲಾಗುತ್ತದೆ. ವರದಿ ಸಿದ್ಧತೆಗಾಗಿ ಪಕ್ಷದ ಹಲವು ಪ್ರಮುಖ ವ್ಯಕ್ತಿಗಳು ಮತ್ತು ನಾಯಕರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಲಭ್ಯವಾದ ನಿಖರ ಮಾಹಿತಿಯನ್ನು ಆಧರಿಸಿಯೇ ವರದಿಯನ್ನು ಸಿದ್ದಪಡಿಸಲಾಗಿದೆ ಎಂದು ಸಿಟಿ ರವಿ ಸ್ಪಷ್ಟಪಡಿಸಿದರು. ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ವರದಿ
ಪಕ್ಷದ ಆಂತರಿಕ ಶಿಸ್ತು ಮತ್ತು ಘನತೆಯ ದೃಷ್ಟಿಯಿಂದ ವರದಿಯಲ್ಲಿರುವ ಯಾವುದೇ ಸಂಗತಿಯನ್ನು ತಾವು ಸಾರ್ವಜನಿಕವಾಗಿ ಚರ್ಚಿಸಲು ಬಯಸುವುದಿಲ್ಲ ಎಂದು ಸಿ.ಟಿ. ರವಿ ಹೇಳಿದರು. ಪರಿಷತ್ ಚುನಾವಣೆಯಲ್ಲಿ ನಡೆದಿರುವುದು ಗೋಪ್ಯ ಮತದಾನ ಆಗಿರುವುದರಿಂದ ಕೇವಲ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಕೆಲವರನ್ನು ಅನುಮಾನಿಸಬಹುದೇ ಹೊರತು, ಯಾರನ್ನೂ ನೇರವಾಗಿ ಮತ್ತು ಖಚಿತವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸಾಧ್ಯವಿಲ್ಲ ಎಂದರು.
ಗೃಹಲಕ್ಷ್ಮಿ ಯೋಜನೆಯಲ್ಲಿ 250 ಕೋಟಿ ಹಗರಣ: ಸಿಬಿಐ ತನಿಖೆಗೆ ಆಗ್ರಹ ಇದೇ ವೇಳೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ವಿರುದ್ಧ ಸಿ.ಟಿ. ರವಿ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿದರು. ಗೃಹಲಕ್ಷ್ಮಿ ಯೋಜನೆಯಲ್ಲಿ ಸುಮಾರು 250 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಗರಣ ನಡೆದಿದ್ದು, ಪ್ರಕರಣವನ್ನು ತಕ್ಷಣವೇ ಸಿಬಿಐ (CBI) ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಅಧೀನದಲ್ಲಿರುವ ಯಾವುದೇ ತನಿಖಾ ಸಂಸ್ಥೆಯಿಂದ ಈ ಹಗರಣದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ. ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ಹಣ ಲೂಟಿ ಮಾಡಿರುವುದನ್ನು ಪತ್ತೆ ಹಚ್ಚಿದ್ದು ರಾಜ್ಯ ಸರ್ಕಾರವಲ್ಲ, ಬದಲಿಗೆ ಸಿಎಜಿ (CAG) ವರದಿಯಲ್ಲಿ ಈ ಮಹಾ ವಂಚನೆ ಬಯಲಾಗಿದೆ ಎಂದು ಕಿಡಿಕಾರಿದರು.
ಇಷ್ಟೊಂದು ದೊಡ್ಡ ಮಟ್ಟದ ಭ್ರಷ್ಟಾಚಾರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಿ.ಟಿ. ರವಿ ಆಕ್ರೋಶ ಹೊರಹಾಕಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.