2026-03-07 03:35:43

Minister RB Thimmapura warns | ಲಂಚ ಪಡೆದ ಅಧಿಕಾರಿಗಳ ವಿರುದ್ಧ ಕ್ರಮ ಅಬಕಾರಿ ಸಚಿವ ಆರ್‌ ಬಿ ತಿಮ್ಮಾಪುರ ಎಚ್ಚರಿಕೆ | Speed News Kannada

Minister RB Thimmapura warns | ಲಂಚ ಪಡೆದ ಅಧಿಕಾರಿಗಳ ವಿರುದ್ಧ ಕ್ರಮ ಅಬಕಾರಿ ಸಚಿವ ಆರ್‌ ಬಿ ತಿಮ್ಮಾಪುರ ಎಚ್ಚರಿಕೆ | Speed News Kannada

ಬೆಂಗಳೂರು: ಮದ್ಯ ಮಾರಾಟ ಸನ್ನದು ನೀಡಲು ಲಂಚ ಪಡೆದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಎಚ್ಚರಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ಇಂದು ಇಲಾಖಾ ಪ್ರಗತಿಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಲಂಚ ಪಡೆಯಲು ಕೆಲವು ಅಧಿಕಾರಿಗಳು ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಅಬಕಾರಿ ಖಾತೆಯೇ ಸ್ವರೂಪವೇ ಹಾಗಿದೆ. ಈ ಹಿಂದೆ ಅಬಕಾರಿ ಇಲಾಖೆಯನ್ನು ನಿರ್ವಹಿಸಿದವರ ವಿರುದ್ಧವೂ ಆರೋಪಗಳು ಕೇಳಿಬಂದಿದ್ದವು. ಈಗಲೂ ಬರುತ್ತಿವೆ. ಆದರೆ ಅವೆಲ್ಲಾ ಸುಳ್ಳು ಆರೋಪಗಳು ಎಂದು ಪ್ರತಿಪಾದಿಸಿದರು.
ಸನ್ನದು ನೀಡುವಾಗ ಮತ್ತು ನವೀಕರಣ ಮಾಡುವಾಗ ಹಲವು ಸುಧಾರಣಾ ಕ್ರಮಗಳನ್ನು ತಂದಿದ್ದೇನೆ. ಇದರಿಂದ ಹಲವು ಅಧಿಕಾರಿಗಳಿಗೆ ಅನಾನುಕೂಲ ಆಗಿರಲೂಬಹುದು. ಹೀಗಾಗಿ  ಕೆಲವರು ಆರೋಪ ಮಾಡುತ್ತಿದ್ದಾರೆ. ಇಲಾಖೆಯ ವಿರುದ್ಧ ಆರೋಪ ಮಾಡುತ್ತಿರುವ ಸಂಘಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದರು.
ಇತ್ತೀಚೆಗಷ್ಟೇ ಮುಗಿದ ವಿಶೇಷ ಅಧಿವೇಶನದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಕುರಿತು ಚರ್ಚೆ ನಡೆಸುವುದು ಬಿಜೆಪಿ ಸದಸ್ಯರಿಗೆ ಬೇಕಿರಲಿಲ್ಲ. ಹೀಗಾಗಿ ನನ್ನನ್ನು ಗುರಿಯಾಗಿಸಿಕೊಂಡರು.  ಆದರೂ, ನಮ್ಮ ಸರ್ಕಾರ ನರೇಗಾ ಕುರಿತು ಪರಿಣಾಮಕಾರಿ ಚರ್ಚೆ ನಡೆಸಿತು ಎಂದು ಪ್ರತಿಪಾದಿಸಿದರು.
2025–26ನೇ ಸಾಲಿನ ಬಜೆಟ್‌ನಲ್ಲಿ ಅಬಕಾರಿ ಇಲಾಖೆಯಿಂದ ರೂ. 40,000 ಕೋಟಿ ಆದಾಯ ಸಂಗ್ರಹವಾಗಬಹುದು ಎಂದು ಅಂದಾಜು ಮಾಡಲಾಗಿತ್ತು. ಈಗಾಗಲೇ ರೂ. 34,000 ಕೋಟಿ ಸಂಗ್ರಹವಾಗಿದೆ. ಆರ್ಥಿಕ ವರ್ಷದ ಅಂತ್ಯಕ್ಕೆ ನಿರೀಕ್ಷಿತ ಗುರಿ ತಲುಪುತ್ತೇವೆ ಎಂದು ತಿಮ್ಮಾಪುರ ಅವರು ವಿಶ್ವಾಸ ವ್ಯಕ್ತಪಡಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.