2026-06-08 01:31:18

Minister NS Bhosaraju discusses with Brazilian minister | ಕ್ವಾಂಟಮ್‌ ತಂತ್ರಜ್ಞಾನ ಅಭಿವೃದ್ದಿ ಬ್ರೆಜಿಲ್‌ ಸಚಿವೆ ಜತೆ ಸಚಿವ ಎನ್‌ ಎಸ್‌ ಭೋಸರಾಜು ಚರ್ಚೆ | Speed News Kannada

Minister NS Bhosaraju discusses with Brazilian minister | ಕ್ವಾಂಟಮ್‌ ತಂತ್ರಜ್ಞಾನ ಅಭಿವೃದ್ದಿ ಬ್ರೆಜಿಲ್‌ ಸಚಿವೆ ಜತೆ ಸಚಿವ ಎನ್‌ ಎಸ್‌ ಭೋಸರಾಜು ಚರ್ಚೆ | Speed News Kannada

ಬೆಂಗಳೂರು: ಜಾಗತಿಕ ಅಭಿವೃದ್ದಿಯನ್ನು ಮುನ್ನಡೆಸುವ ಪ್ರಮುಖ ಒಕ್ಕೂಟವಾಗಿರುವ ʼಬ್ರಿಕ್ಸ್”‌ ರಾಷ್ಟ್ರಗಳು ಕ್ವಾಂಟಮ್‌ ತಂತ್ರಜ್ಞಾನದ ಅಭಿವೃದ್ದಿಗೆ ಪರಸ್ಪರ ಸಹಕಾರಕ್ಕೆ ಮುಂದಾಗಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಕರೆ ನೀಡಿದರು. 
ಇಂದು ವಿಧಾನಸೌಧದಲ್ಲಿ ತಮ್ಮ ನ್ನು ಭೇಟಿಯಾದ ಬ್ರೆಜಿಲ್‌ನ ಸಾರ್ವಜನಿಕ ಸೇವೆಗಳ ನಿರ್ವಹಣೆ ಮತ್ತು ನಾವೀನ್ಯತೆ ಸಚಿವೆ  ಎಸ್ತರ್ ಡ್ವೆಕ್ ಅವರ ನೇತೃತ್ವದ ಬ್ರೆಜಿಲ್ ದೇಶದ ಉನ್ನತ ಮಟ್ಟದ ನಿಯೋಗದೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. 
"ಆಸಿಯಾನ್ (ASEAN) ನಂತಹ ಇತರ ಅಂತರರಾಷ್ಟ್ರೀಯ ಒಕ್ಕೂಟಗಳು ಈಗಾಗಲೇ ಕ್ವಾಂಟಮ್ ಶೃಂಗಸಭೆಗಳನ್ನು ಆಯೋಜಿಸುತ್ತಿವೆ. ಬ್ರಿಕ್ಸ್ ಸದಸ್ಯರಾಗಿ ನಾವು ಕೃಷಿ, ಔಷಧ ಸಂಶೋಧನೆ  ಜಲಸಂಪನ್ಮೂಲ ನಿರ್ವಹಣೆ, ಹವಾಮಾನ ಮುನ್ಸೂಚನೆ ಮತ್ತು ಪ್ರವಾಹ ನಿರ್ವಹಣೆಯನ್ನು ಸುಧಾರಿಸಲು ಕ್ವಾಂಟಮ್ ತಂತ್ರಜ್ಞಾನವನ್ನು ಬಳಸುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕು. ಆ ಮೂಲಕ ನಮ್ಮ ಸಮಸ್ಯೆಗಳನ್ನು ಜಂಟಿಯಾಗಿ ಬಗೆಹರಿಸಿಕೊಂಡು ದೇಶದ ಅಭಿವೃದ್ದಿಗೆ ಮುಂದಾಗಬೇಕಾಗಿದೆ” ಎಂದು ಅವರು ತಿಳಿಸಿದರು. 
ರಾಜ್ಯದ ಪ್ರಮುಖ ಸಾಧನೆಗಳನ್ನು ವಿವರಿಸಿದ ಸಚಿವರು, "ಕರ್ನಾಟಕ ರಾಜ್ಯ ಈಗಾಗಲೇ ದೇಶದ ಮೊಟ್ಟಮೊದಲ, ಸ್ಥಳೀಯವಾಗಿ ನಿರ್ಮಿಸಲಾದ ವಾಣಿಜ್ಯ ಕ್ವಾಂಟಮ್ ಕಂಪ್ಯೂಟರ್ ಹೊಂದಿದ್ದೇವೆ. ರಾಜ್ಯದ ಮಹತ್ವಾಕಾಂಕ್ಷೆಯ ಗುರಿಗಳನ್ನು ವಿವರಿಸಿದ ಅವರು, 100 ಮಿಲಿಯನ್ ಯುಎಸ್ ಡಾಲರ್ ಮೊತ್ತದ 'ಕ್ವಾಂಟಮ್ ಇನ್ನೋವೇಶನ್ ಫಂಡ್' ಘೋಷಣೆ ಮತ್ತು 'ಕ್ವಾಂಟಮ್ ಸಿಟಿ' ಅಭಿವೃದ್ಧಿಯೊಂದಿಗೆ ಕರ್ನಾಟಕವು ದೇಶಕ್ಕೇ ಮಾದರಿಯಾಗಿದೆ ಎಂದರು.
"2035ರ ವೇಳೆಗೆ 20 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಕ್ವಾಂಟಮ್ ಆರ್ಥಿಕತೆಯನ್ನು ಸೃಷ್ಟಿಸುವುದು ಮತ್ತು ಎರಡು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ," ಕೃಷಿ, ಪ್ರವಾಹ ನಿರ್ವಹಣೆ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಕ್ವಾಂಟಮ್ ತಂತ್ರಜ್ಞಾನವನ್ನು ಬಳಸುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕ್ವಾಂಟಮ್ ಕಂಪ್ಯೂಟಿಂಗ್ ಹೊರತಾಗಿ, ಸಭೆಯಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (Digital Public Infrastructure), ಕೃತಕ ಬುದ್ಧಿಮತ್ತೆ (AI) ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಕುರಿತೂ ವ್ಯಾಪಕ ಚರ್ಚೆ ನಡೆಯಿತು.
ಇದಕ್ಕೂ ಮುನ್ನ ನಿನ್ನೆ, ಬೊಲಿವಿಯಾದ ವಿಜ್ಞಾನ ಮತ್ತು ತಂತ್ರಜ್ಞಾನ ಉಪಸಚಿವ ಒಮರ್ ಅಲ್ಫ್ರೆಡೊ ಪೆನಲೋಜಾ ಎಸ್ಕಲೇರಾ ಅವರ ನೇತೃತ್ವದ ನಿಯೋಗವು, ಕಾರ್ಯತಂತ್ರದ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಚಿವ ಎನ್.ಎಸ್. ಭೋಸರಾಜು ಅವರೊಂದಿಗೆ ಫಲಪ್ರದ ದ್ವಿಪಕ್ಷೀಯ ಸಭೆ ನಡೆಸಿತು. ಐಟಿ/ಬಿಟಿ ಇಲಾಖೆ ಕಾರ್ಯದರ್ಶಿ ಎನ್. ಮಂಜುಳಾ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ, ಶಿಕ್ಷಣ, ಆರೋಗ್ಯ ಮತ್ತು ಒಟ್ಟಾರೆ ಜೀವನಮಟ್ಟವನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆ (AI) ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.