2026-03-07 05:13:42

Minister Kumaraswamy hits back at CM Siddaramaiah | ಫೋನ್ ಕದ್ದಾಲಿಕೆ ಸಿಎಂ ಸಿದ್ದರಾಮಯ್ಯ ಸುಳ್ಳಿಗೆ ತಿರುಗೇಟು ಕೊಟ್ಟ ಸಚಿವ ಕುಮಾರಸ್ವಾಮಿ | Speed News Kannada

Minister Kumaraswamy hits back at CM Siddaramaiah | ಫೋನ್ ಕದ್ದಾಲಿಕೆ ಸಿಎಂ ಸಿದ್ದರಾಮಯ್ಯ ಸುಳ್ಳಿಗೆ ತಿರುಗೇಟು ಕೊಟ್ಟ ಸಚಿವ ಕುಮಾರಸ್ವಾಮಿ | Speed News Kannada

ಬೆಂಗಳೂರು: ಫೋನ್ ಕದ್ದಾಲಿಕೆ ಬಗ್ಗೆ ತಮ್ಮ ಹೇಳಿಕೆಯನ್ನು ಗ್ರಹಿಸದೆ ತಮ್ಮ ಮೇಲೆ ವಿನಾಕಾರಣ ಆರೋಪ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾನು ಪೋನ್ ಕದ್ದಾಲಿಕೆ ಮಾಡಿದ್ದಿದ್ದರೆ ಹೇಗಾದರೂ ಸರಿ, ಅಧಿಕಾರ ಉಳಿಸಿಕೊಳ್ಳುತ್ತಿದ್ದೆ. ಹಾಗೆ ಮಾಡಿದ್ದಿದ್ದರೆ ಸಿದ್ದವನದಲ್ಲಿ ಕೂತು ಯಾವ ಕರಾಮತ್ತು ನಡೆಸಿತು ಎನ್ನುವುದನ್ನು ಪತ್ತೆ ಹಚ್ಚುತ್ತಿದ್ದೆ. ಅದು ನನಗೆ ಬೇಕಿರಲಿಲ್ಲ, ಕಳೆದುಕೊಂಡಿದ್ದರ ಬಗ್ಗೆಯೂ ನನಗೆ ಚಿಂತೆ ಇಲ್ಲ. ಆದರೆ, ಆ ಪಾಪಪ್ರಜ್ಞೆ ನಿಮ್ಮನ್ನು ಕಾಡುತ್ತಿದೆ, ಸದಾ ನೆರಳಿನಂತೆ! ಕದ್ದಾಲಿಕೆ ನನ್ನ ಗುಣವಲ್ಲ, ಅದೇನಿದ್ದರೂ ಕಾಂಗ್ರೆಸ್ ಪಕ್ಷದ್ದೇ ಆವಿಷ್ಕಾರ! ಅದೇ ನಿಮಗೆ ಬಂದಿರುವ ಸಂಸ್ಕಾರ!! ಎಂದು ಕೇಂದ್ರ ಸಚಿವರು ಮುಖ್ಯಮಂತ್ರಿ ಮೇಲೆ ಹರಿಹಾಯ್ದಿದ್ದಾರೆ.
ಈ ನಡುವೆ ನೀವು ಬಹಳ ಪುರುಸೊತ್ತಾಗಿದ್ದೀರಿ ಎಂದು ಭಾವಿಸಿದ್ದೇನೆ. ಕೆಲಸ ಮಾಡುವುದು ಬಿಟ್ಟು ಕೌಂಟರ್ ಕೊಡುವುದರಲ್ಲಿ ಹೆಚ್ಚು ಬ್ಯುಸಿಯಾಗಿದ್ದೀರಿ! ಕುಂಬಳಕಾಯಿ ಕಳ್ಳ ಎಂದರೆ ನಾನೇ.. ನಾನೇ.. ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ? ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳೇ ಮಾತನಾಡುತ್ತಿವೆ. ಆ ಬಗ್ಗೆ ನಾನು ಪ್ರತಿಕ್ರಿಯಿಸಿದ್ದೇನೆ, ಅಷ್ಟೇ. 
ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ: ಪ್ರತಿಪಕ್ಷಗಳು ತಮ್ಮ ಕೆಲಸ ತಾವು ಮಾಡುತ್ತಿವೆ. ಜನರು ದಯೆ ತೋರಿ ನಿಮಗೆ 140 ಸೀಟು ಕೊಟ್ಟರೆ ಆಡಳಿತ ನಡೆಸುವುದು ಬಿಟ್ಟು ಹಾದಿಬೀದಿಯಲ್ಲಿ ಕಚ್ಚಾಡುತ್ತಿದ್ದೀರಿ. ನಿಮ್ಮ ಪಕ್ಷದಲ್ಲಿನ ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ ಎನ್ನುವ ಅನುಮಾನ ಪ್ರತಿಪಕ್ಷಗಳದ್ದು ಮತ್ತು ಮಾಧ್ಯಮಗಳದ್ದು. ಪ್ರಶ್ನಿಸುವ ಜಾಗದಲ್ಲಿ ಪ್ರತಿಪಕ್ಷಗಳಿವೆ, ಉತ್ತರಿಸಿ. ವಿಷಯಾಂತರ ಬಿಟ್ಟು ಸತ್ಯ ಹೇಳಿ. ಸತ್ಯ ನಿಮ್ಮನೆ ದೇವ್ರು ಅಲ್ಲವೇ? ಸತ್ಯಮೇವ ಜಯತೇ ನಿಮ್ಮ ಸಿದ್ದಸ್ಲೋಗನ್! ಕಥೆ ಕಟ್ಟಿ ಕಾಲಹರಣ ಮಾಡುತ್ತಿರೇಕೆ? ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ವ್ಯಾಸ, ತ್ರಿಜ್ಯ ಅಳತೆ ಮಾಡುವ ತೆವಲು ನನಗಿಲ್ಲ: ನಿಮ್ಮ ಪಕ್ಷದಲ್ಲಿರುವ ಆಂತರಿಕ ಪ್ರಜಾಪ್ರಭುತ್ವದ ವ್ಯಾಸ, ತ್ರಿಜ್ಯದ ಬಗ್ಗೆ ಅಳತೆ ಮಾಡುವ ತೆವಲು ನನಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನೂರು ವರ್ಷ ತುಂಬಿದರೂ ಇನ್ನೂ ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ.. ಇದೆ.. ಇದೆ.. ಎಂದು ಹೇಳಿಕೊಳ್ಳುವ ಕರ್ಮ ನಿಮ್ಮದು? ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕುತ್ತಿಗೆಗೆ ಕುಣಿಕೆ ಬಿಗಿದ ಸರ್ವಾಧಿಕಾರಿ ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವದ ಬೇರುಗಳೇ ಇಳಿದಿಲ್ಲ. ರಾಜಕೀಯ ಲಾಭಕ್ಕೆ ಮಹಾತ್ಮ ಗಾಂಧಿ, ರಾಜಕೀಯ ಸ್ವಾರ್ಥಕ್ಕೆ ಪ್ರಜಾಪ್ರಭುತ್ವ, ರಾಜಕೀಯ ಫಸಲಿಗೆ ಸಾಮಾಜಿಕ ನ್ಯಾಯ.. ಇದೇ ನಿಮ್ಮ ರಾಜನೀತಿ. ಹೀಗಾಗಿಯೇ ಭಾರತವು ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ಎಂದರೆ ಶಾಸಕರು ಬೀದಿಯಲ್ಲಿ ಮುಖ್ಯಮಂತ್ರಿಯನ್ನು ಬಯ್ಯುವುದಲ್ಲ: ಪ್ರಜಾಪ್ರಭುತ್ವ ಎಂದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯುವ ಆಡಳಿತ ವ್ಯವಸ್ಥೆ ಎಂದು ನಂಬಿದ್ದೇನೆ. ಪ್ರಜಾಪ್ರಭುತ್ವ ಎಂದರೆ ಶಾಸಕರು ಗುಂಪುಗಾರಿಕೆ ನಡೆಸುವುದಲ್ಲ. ಒಮ್ಮೆ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಮೇಲೆ ಐದೂ ವರ್ಷ ನಾನೇ ಸಿಎಂ.. ನಾನೇ ಸಿಎಂ.. ಎಂದು ಅಲುವತ್ತುಕೊಳ್ಳುವುದಲ್ಲ. ಸಾಕ್ಷಾತ್ ವಿಧಾನಸಭೆಯಲ್ಲಿಯೇ 'ಕುರ್ಚಿ ಬೇಕಿದ್ದರೆ ಒದ್ದು ಕಿತ್ತುಕೊಳ್ಳಬೇಕು' ಎಂದು ದರ್ಪ ತೋರುವುದಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮವನ್ನು ಜಾಹೀರಾತು ಹೆಸರಿನಲ್ಲಿ ಬೆದರಿಸುವುದು, ಬ್ಲ್ಯಾಕ್ ಮೇಲ್ ಮಾಡುವುದಲ್ಲ. ಅಧಿಕಾರದ ಲಾಲಸೆಗೆ ಸಮಾಜವನ್ನು ಜಾತಿವಾರು, ಧರ್ಮವಾರು ಒಡೆದು ಆಳುವುದಲ್ಲ, ಆಶ್ರಯ ಕೊಟ್ಟು ರಾಜಕೀಯ ಬದುಕು ಕಟ್ಟಿಕೊಟ್ಟ ಪಕ್ಷಗಳಿಗೇ ಹಳ್ಳ ತೊಡುವುದಲ್ಲ ಎಂದು ಮುಖ್ಯಮಂತ್ರಿಗೆ ತಿರುಗೇಟು ನೀಡಿದ್ದಾರೆ.
ನನ್ನ ಜತೆ ನೇರ ಸಂಘರ್ಷಕ್ಕೆ ಬಂದಾಗಲೆಲ್ಲ ನೀವು ದೇವೇಗೌಡರನ್ನು ಎಳೆದು ತರುತ್ತೀರಿ. ದೇವೇಗೌಡರು ನಿಮ್ಮ ರಾಜಕೀಯ ಗುರು, ನಿಮ್ಮನ್ನು ಗುರುತಿಸಿ ಬೆಳೆಸಿದವರು. ಅದಕ್ಕಾಗಿ ಎಷ್ಟೋ ನಾಯಕರ ವಿರೋಧ ಕಟ್ಟಿಕೊಂಡರು. ಅದೂ ನಿಮಗೂ ಗೊತ್ತಿದೆ. ಆದರೆ, ಸಮಯಕ್ಕೆ ಕಾಯುತ್ತಿದ್ದ ನೀವು ಗುರುವಿಗೆ ಗುನ್ನ ಇಟ್ಟಿರಿ. ಅಷ್ಟರ ಮಟ್ಟಿಗೆ ನಿಮ್ಮ ಕಪಟತನ, ಕುಟಿಲತೆಯನ್ನು ಸ್ವಯಂ ಸ್ಮರಣೆ ಮಾಡುತ್ತಿದ್ದೀರಿ, ಸಂತೋಷ ಎಂದು ಸಚಿವರು ಲೇವಡಿ ಮಾಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.