ನ್ಯೂ ಕ್ಯಾಸಲ್ (ಯುಕೆ): ಕರ್ನಾಟಕ ಸರ್ಕಾರದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಯುಕೆಯ ಪ್ರತಿಷ್ಠಿತ ನ್ಯೂಕ್ಯಾಸಲ್ ವಿಶ್ವವಿದ್ಯಾ ಲಯಕ್ಕೆ ಭೇಟಿ ನೀಡಿ ಜ್ಞಾನ ವಿನಿಮಯ ಕಾರ್ಯಕ್ರಮದಡಿ ವಿಶ್ವವಿದ್ಯಾಲಯದ ಮುಖ್ಯಸ್ಥರು, ವಿಜ್ಞಾ ನಿಗಳು ಮತ್ತು ಸಂಶೋಧಕರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕದ ಕೃಷಿ ಚಿತ್ರಣವನ್ನು ತೆರೆದಿಟ್ಟ ಸಚಿವರು, ರಾಜ್ಯವು 191 ಲಕ್ಷ ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣದಲ್ಲಿ 124 ಲಕ್ಷ ಹೆಕ್ಟೇರ್ ಕೃಷಿ ಯೋಗ್ಯ ಭೂಮಿ ಮತ್ತು 10 ವೈವಿಧ್ಯಮಯ ಕೃಷಿ ಹವಾಮಾನ ವಲಯಗಳನ್ನು ಹೊಂದಿರುವ ಪ್ರಗತಿಪರ ರಾಜ್ಯವಾಗಿದೆ ಎಂದು ತಿಳಿಸಿದರು.
ರಾಜ್ಯದ ಒಟ್ಟು ಕೃಷಿ ಭೂಮಿಯಲ್ಲಿ ಶೇ . 35 ರಷ್ಟು ಅಂದರೆ 36 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯ ಹೊಂದಿದ್ದು ಭತ್ತ, ಕಬ್ಬು , ಹತ್ತಿ, ಜೋಳ, ರಾಗಿ ಹಾಗೂ ತೋಟಗಾರಿಕ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಮತ್ತು ತೆಂಗು, ಕಾಫಿ, ಮೆಣಸಿನಂತಹ ವಾಣಿಜ್ಯ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಕರ್ನಾಟಕವು ವಾರ್ಷಿಕವಾಗಿ 150 ರಿಂದ 160 ಲಕ್ಷ ಟನ್ ಆಹಾರ ಧಾನ್ಯಗಳನ್ನು ಉತ್ಪಾದಿಸುವ ಮೂಲಕ ರಾಜ್ಯದ ಒಟ್ಟು ಜಿಡಿಪಿಗೆ ಶೇ . 15 ರಿಂದ 20 ರಷ್ಟು ಕೊಡುಗೆ ನೀಡುತ್ತಿದೆ ಮತ್ತು ಶೇ . 55 ರಷ್ಟು ಜನರಿಗೆ ಕೃಷಿ ಹಾಗೂ ಸಂಬಂಧಿತ ವಲಯಗಳಲ್ಲಿ ಉದ್ಯೋಗವಕಾಶ ಒದಗಿಸುತ್ತಿದೆ ಎಂದರು.
ಸಿಲಿಕಾನ್ ವ್ಯಾ ಲಿ ಎಂದು ಕರೆಯಲ್ಪಡುವ ಬೆಂಗಳೂರು ನಗರವು ಕೃಷಿ ಆಧಾರಿತ ಸ್ಟಾರ್ಟ್ ಅಪ್ ಗಳಿಗೆ ಪೂರಕವಾದ ಪರಿಸರವನ್ನು ಹೊಂದಿದ್ದು, ರಾಜ್ಯವು ಸಿರಿಧಾನ್ಯಗಳು, ಹಣ್ಣು, ತರಕಾರಿ, ಕಾಫಿ ಮತ್ತು ರೇಷ್ಮೆ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ಮಳೆಯಾಶ್ರಿತ ಕೃಷಿ ಭೂಮಿಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕರ್ನಾಟಕವು ಈಗಾಗಲೇ 75 ಲಕ್ಷ ಹೆಕ್ಟೇರ್ ಪ್ರದೇಶವನ್ನು ಜಲಾನಯನ ಕಾರ್ಯಕ್ರಮದಡಿ ತಂದಿದ್ದು, ಇನ್ನೂ 51 ಲಕ್ಷ ಹೆಕ್ಟೇರ್ ಪ್ರದೇಶವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನಲ್ಲಿ ಜಲಾನಯನ ನಿರ್ವ ಹಣೆಗಾಗಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಿರುವುದನ್ನು ಅವರು ಉಲ್ಲೇಖಿಸಿದರು. ಜಲಾನಯನ ಅಭಿವೃದ್ಧಿಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದ್ದರೂ, ಸಂಪನ್ಮೂಲ ಸಂರಕ್ಷಣೆ ಮತ್ತು ಭೂದೃಶ್ಯ ಮರುಸ್ಥಾಪನೆಗಾಗಿ ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್ (ML), ರಿಮೋಟ್ ಸೆನ್ಸಿಂಗ್, ರೋಬೋಟಿಕ್ಸ್ ಮತ್ತು ಐಒಟಿ (IoT) ನಂತಹ ಅತ್ಯಾ ಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.