ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದ್ದು, ಜಗತ್ತು ಮೂರನೇ ಮಹಾಯುದ್ಧದ ಅಂಚಿಗೆ ಬಂದು ನಿಂತಿದೆ. ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇರಾನ್ ಪಡೆಗಳು ನಡೆಸಿದ ಸರಣಿ ದಾಳಿಗಳಿಗೆ ಅಮೆರಿಕ ಅತಿ ಭೀಕರವಾಗಿ ಪ್ರತೀಕಾರ ತೀರಿಸಿಕೊಂಡಿದೆ. ಇರಾನ್ನ ಇತಿಹಾಸದಲ್ಲೇ ಅತ್ಯಂತ ದ್ರೋಹದ ಹಾಗೂ ಬೃಹತ್ ಎನ್ನಲಾದ ವಾಯುದಾಳಿಗಳನ್ನು ಅಮೆರಿಕ ಮಿಲಿಟರಿ ಆರಂಭಿಸಿದೆ. ಇರಾನ್ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ದಿನಗಳಂದೇ ಅಮೆರಿಕ ಈ ರಣವಿಕ್ರಮಕ್ಕೆ ಕೈಹಾಕಿರುವುದು ಇಡೀ ಜಗತ್ತನ್ನು ಬೆಚ್ಚಿಬೀಳಿಸಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಇರಾನ್ ದೇಶದ ಒಳಗಿರುವ ಕನಿಷ್ಠ 80ಕ್ಕೂ ಹೆಚ್ಚು ಆಯಕಟ್ಟಿನ ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ಏಕಕಾಲದಲ್ಲಿ ಯುದ್ಧವಿಮಾನಗಳು ಹಾಗೂ ಕ್ಷಿಪಣಿಗಳು ಮುಗಿಬಿದ್ದಿವೆ. ಈ ದಾಳಿಯು ಕಳೆದ ಜೂನ್ ತಿಂಗಳಿನಲ್ಲಿ ನಡೆದಿದ್ದ ವಾಯುದಾಳಿಗಿಂತ ಬರೋಬ್ಬರಿ ಎಂಟು ಪಟ್ಟು ಹೆಚ್ಚು ತೀವ್ರ ಮತ್ತು ವಿನಾಶಕಾರಿಯಾಗಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ವಿಶ್ವದ ಪ್ರಮುಖ ತೈಲ ಮಾರ್ಗದಲ್ಲಿ ಉದ್ಧಟತನ ತೋರಿದ್ದ ಇರಾನ್ ಅಮೆರಿಕ ಇಷ್ಟೊಂದು ಆಕ್ರೋಶಗೊಳ್ಳಲು ಇರಾನ್ ಇತ್ತೀಚೆಗೆ ಹಾರ್ಮುಜ್ ಜಲಸಂಧಿಯಲ್ಲಿ ನಡೆಸಿದ ಸರಣಿ ದಾಳಿಗಳೇ ಕಾರಣ. ಜಾಗತಿಕವಾಗಿ ಅತ್ಯಂತ ಪ್ರಮುಖವಾಗಿರುವ ಈ ಸಮುದ್ರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕತಾರ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಮೂರು ದೇಶಗಳ ವಾಣಿಜ್ಯ ತೈಲ ಹಡಗುಗಳ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿತ್ತು. ಇದು ಇರಾನ್ ಮತ್ತು ಅಮೆರಿಕ ನಡುವೆ ಕಳೆದ ತಿಂಗಳಷ್ಟೇ ಏರ್ಪಟ್ಟಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದದ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಅಮೆರಿಕ ಆಕ್ರೋಶ ಹೊರಹಾಕಿದೆ. ಈ ಸೈನಿಕ ಕಾರ್ಯಾಚರಣೆಗೆ ಮುನ್ನವೇ ಅಮೆರಿಕವು ಇರಾನ್ಗೆ ತೈಲ ಮಾರಾಟ ಮಾಡಲು ನೀಡಿದ್ದ ವಿಶೇಷ ವಿನಾಯಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಆರ್ಥಿಕವಾಗಿ ಇರಾನ್ನ ಬೆನ್ನೆಲುಬು ಮುರಿಯುವ ಕೆಲಸ ಮಾಡಿತ್ತು.
ಕಣ್ಣಿಟ್ಟ ಜಾಗಗಳನ್ನೆಲ್ಲಾ ಧೂಳೀಪಟ ಮಾಡಿದ ಅಮೆರಿಕ ಫೈಟರ್ ಜೆಟ್ಗಳು ಸದ್ಯ ಅಮೆರಿಕದ ಯುದ್ಧ ವಿಮಾನಗಳು ಇರಾನ್ನ ದಕ್ಷಿಣ ಕರಾವಳಿ ಭಾಗಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸುತ್ತಿವೆ. ಇರಾನ್ನ ಅತ್ಯಾಧುನಿಕ ಏರ್ ಡಿಫೆನ್ಸ್ ಸಿಸ್ಟಮ್ಸ್ (ವಾಯು ರಕ್ಷಣಾ ವ್ಯವಸ್ಥೆಗಳು), ಕರಾವಳಿ ಕಾವಲು ರಾಡಾರ್ ಕೇಂದ್ರಗಳು, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ 60 ಕ್ಕೂ ಹೆಚ್ಚು ಸಣ್ಣ ಯುದ್ಧ ಬೋಟ್ಗಳು, ಡ್ರೋನ್ ಉಡಾವಣಾ ಕೇಂದ್ರಗಳು ಮತ್ತು ಹಡಗು ವಿರೋಧಿ ಕ್ರೂಸ್ ಕ್ಷಿಪಣಿ ನೆಲೆಗಳ ಮೇಲೆ ಬಾಂಬ್ಗಳ ಮಳೆ ಸುರಿಸಲಾಗಿದೆ. ಇರಾನ್ನ ಪ್ರಮುಖ ಬಂದರು ನಗರಗಳಾದ ಬಂದರ್ ಅಬ್ಬಾಸ್ ಮತ್ತು ಸಿರಿಕ್ ತೀವ್ರ ದಾಳಿಗೆ ತುತ್ತಾಗಿವೆ. ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಮುಗ್ಧ ನಾಗರಿಕರಿರುವ ಹಡಗುಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿದರೆ ಇರಾನ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಸಿದೆ. ಟರ್ಕಿಯಲ್ಲಿ ನಡೆಯುತ್ತಿರುವ ನ್ಯಾಟೋ (NATO) ಶೃಂಗಸಭೆಯಲ್ಲಿದ್ದಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಭೀಕರ ದಾಳಿಯ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ವರದಿಗಳು ಖಚಿತಪಡಿಸಿವೆ. ಇತ್ತ ಇರಾನ್ ವಿದೇಶಾಂಗ ಸಚಿವಾಲಯವು ಅಮೆರಿಕದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ಅಮೆರಿಕಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಗುಡುಗಿದೆ. ಉಭಯ ದೇಶಗಳ ಈ ಜಿದ್ದಾಜಿದ್ದಿನಿಂದಾಗಿ ಮಧ್ಯಪ್ರಾಚ್ಯದಲ್ಲಿ ಯಾವುದೇ ಕ್ಷಣದಲ್ಲೂ ಮಹಾಯುದ್ಧ ಸ್ಫೋಟಗೊಳ್ಳುವ ಆತಂಕ ನಿರ್ಮಾಣವಾಗಿದೆ.