ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವಸಂಪುಟದ ಮೊದಲನೇ ವಿಕೆಟ್ ಇವತ್ತು ಪತನವಾಗಿದೆ. ಖಾತೆ, ಯಾವ ಜಿಲ್ಲೆ ಉಸ್ತುವಾರಿಗೆ ಪೈಪೋಟಿ ಆರಂಭವಾಗಿದೆ. ಹಾಗಾಗಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಂದರೂ ಅಚ್ಚರಿಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮಲಿಂಗಾರೆಡ್ಡಿಯವರು ಹಿರಿಯರಿದ್ದಾರೆ. ಅವರ ಬಗ್ಗೆ ಮಾತನಾಡಲು ಹೋಗುವುದಿಲ್ಲ; ಕಾಂಗ್ರೆಸ್ಸಿನವರಿಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತನೆ ಇಲ್ಲ ಎಂಬುದು ವಾಸ್ತವಿಕ ಸತ್ಯ. ನಾಡಿನ ರೈತರ ಸಮಸ್ಯೆ ಪರಿಹಾರದ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಟೀಕಿಸಿದರು.
ಹಗ್ಗಜಗ್ಗಾಟದಲ್ಲೇ 3 ವರ್ಷ ಕಳೆದಿದ್ದಾರೆ. ಸಚಿವರು ನಾಮಕಾವಾಸ್ತೆ ಉಸ್ತುವಾರಿ ಸಚಿವರಾಗಿದ್ದರು, ತಮ್ಮ ಜಿಲ್ಲೆಗೆ ಸೀಮಿತವಾಗಿದ್ದರೇ ಹೊರತು ಯಾವುದೇ ಇತರ ಜಿಲ್ಲೆಗೆ ಪ್ರವಾಸ ಮಾಡಿಲ್ಲ. ಈಗ ಶಿವಕುಮಾರ್ ಅವರ ನೇತೃತ್ವದಲ್ಲಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಇರುವುದು ಕೇವಲ 2 ವರ್ಷ ಮಾತ್ರ. ಈಗ ಮತ್ತೆ ಹಗ್ಗಜಗ್ಗಾಟ, ಯಾವ ಖಾತೆ, ಯಾವ ಜಿಲ್ಲೆ ಉಸ್ತುವಾರಿ ಪಡೆದುಕೊಳ್ಳಬೇಕೆಂಬ ಕಿತ್ತಾಟದಲ್ಲಿ ಇವತ್ತು ರಾಮಲಿಂಗಾರೆಡ್ಡಿಯವರು ರಾಜೀನಾಮೆ ನೀಡಿದ್ದಾರೆ ಎಂದರು.
ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಸರಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಬಡವರ ವಿರೋಧಿ, ಜನವಿರೋಧಿ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಬೇಕು; ಮುಂದೆ ಬಿಜೆಪಿ ಸರಕಾರ ಬರಬೇಕೆಂಬ ನಿರೀಕ್ಷೆ, ಅಪೇಕ್ಷೆ ಜನರಲ್ಲಿದೆ. ಪರಸ್ಪರ ಕಾಲೆಳೆಯುತ್ತಾ ಸಮಯ ಕಳೆಯಲಿದ್ದು, ಮಧ್ಯಂತರ ಚುನಾವಣೆ ಬಂದರೂ ಅಚ್ಚರಿಯಿಲ್ಲ ಎಂದು ತಿಳಿಸಿದರು.
ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ಮತದಾರರು ಬದಲಾವಣೆ ಬಯಸುತ್ತಿದ್ದಾರೆ ಆಗಲು ನೂರಾರು ಕಾರಣಗಳಿವೆ. ಈಗ ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ನಮ್ಮ ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ಹೇಳಿದರು. ವಿಧಾನಪರಿಷತ್‍ನ 2 ಸ್ಥಾನ, ರಾಜ್ಯಸಭೆಯ ಒಂದು ಸ್ಥಾನದ ಸ್ಪರ್ಧಿಗಳ ಕುರಿತು ಕೇಂದ್ರದ ವರಿಷ್ಠರು ಇವತ್ತು ಅಥವಾ ನಾಳೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.