ವಿನೋದ್ ಪ್ರಭಾಕರ್ ಅಭಿನಯದ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ
ಬೆಂಗಳೂರು ಚಿತ್ರೋತ್ಸವ ವೇದಿಕೆ: ರಾಧಾಕೃಷ್ಣ ಪಿಕ್ಚರ್ಸ್ ಲಾಂಛನದಲ್ಲಿ ಆರ್. ಕೇಶವ ನಿರ್ಮಿಸಿರುವ, ನವೀನ್ ರೆಡ್ಡಿ ಬಿ ನಿರ್ದೇಶನದ ಹಾಗೂ ವಿನೋದ್ ಪ್ರಭಾಕರ್ - ಸೋನಾಲ್ ಮೊಂತೆರೊ ನಾಯಕ - ನಾಯಕಿಯಾಗಿ ನಟಿಸಿರುವ ʼಮಾದೇವʼ ಚಿತ್ರ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ಪ್ರದರ್ಶನದ ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ʼನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ ಕನ್ನಡ ಕಲಾಭಿಮಾನಿಗಳು ನೀಡುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. ನನ್ನ ಅಭಿನಯದ ʼಮಾದೇವʼ ಚಿತ್ರ ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ಚಿತ್ರೋತ್ಸವದಲ್ಲಿ ನಮ್ಮ ಚಿತ್ರ ನೋಡಿದವರು ಮೆಚ್ಚುಗೆ ಸೂಚಿಸಿದ್ದು ಕಂಡು ಮನತುಂಬಿ ಬಂದಿದೆ. ʼಮಾದೇವʼ ತುಂಬಾ ಭಾವನಾತ್ಮಕ ಚಿತ್ರ. ನಾನು ಹ್ಯಾಂಗ್ ಮ್ಯಾನ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರಮಂದಿರಗಳಲ್ಲೂ 50 ದಿನಗಳ ಯಶಸ್ವಿ ಪ್ರದರ್ಶನ ಕಂಡಿರುವ ನಮ್ಮ ಚಿತ್ರಕ್ಕೆ ಅಮೇಜಾನ್ ಪ್ರೈಮ್ ನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಹೀಗೆ ಇರಲಿʼ ಎಂದರು ನಾಯಕ ನಟ ವಿನೋದ್ ಪ್ರಭಾಕರ್.
ʼಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಿದೆ. ಚಿತ್ರೋತ್ಸವದಲ್ಲಿ ಸಾಕಷ್ಟು ಸಿನಿಮಾಸಕ್ತರು ಬಂದು ಸಿನಿಮಾ ನೋಡುತ್ತಿದ್ದಾರೆ. ನಮ್ಮ ಚಿತ್ರವನ್ನು ಚಿತ್ರೋತ್ಸವದಲ್ಲಿ ಹೆಚ್ಚಿನ ಜನರು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದು ಬಹಳ ಖುಷಿಯಾಗಿದೆʼ ಎಂದು ನಿರ್ದೇಶಕ ನವೀನ್ ರೆಡ್ಡಿ ತಿಳಿಸಿದರು.