2026-06-08 03:53:34

LPG | ಆಟೋಗ್ಯಾಸ್ ಅಭಾವ ರಾಜ್ಯಾದ್ಯಂತ ಚಾಲಕರ ಪರದಾಟ | Speed News Kannada

LPG | ಆಟೋಗ್ಯಾಸ್ ಅಭಾವ ರಾಜ್ಯಾದ್ಯಂತ ಚಾಲಕರ ಪರದಾಟ | Speed News Kannada

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕಳೆದ ಕೆಲವು ದಿನಗಳಿಂದ ಆಟೋಗ್ಯಾಸ್ ತೀವ್ರ ಅಭಾವ ತಲೆದೋರಿದೆ. ಇದರಿಂದಾಗಿ ಆಟೋ ರಿಕ್ಷಾ ಚಾಲಕರು ಇಂಧನಕ್ಕಾಗಿ ಹಗಲಿಡೀ ಬಂಕ್‌ಗಳ ಮುಂದೆ ಕಾಯುವಂತಾಗಿದ್ದು, ಸಾಮಾನ್ಯ ಜನರ ಸಂಚಾರಕ್ಕೂ ಅಡ್ಡಿಯುಂಟಾಗಿದೆ.
ನಗರದ ಬಹುತೇಕ ಆಟೋಗ್ಯಾಸ್ ಬಂಕ್‌ಗಳಲ್ಲಿ 'ನೋ ಸ್ಟಾಕ್' ಬೋರ್ಡ್‌ ಗಳು ರಾರಾಜಿಸುತ್ತಿವೆ. ಗ್ಯಾಸ್ ಲಭ್ಯವಿರುವ ಕೆಲವೇ ಕೆಲವು ಬಂಕ್‌ಗಳ ಮುಂದೆ ಮುಂಜಾನೆಯಿಂದಲೇ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಒಂದು ಬಾರಿ ಗ್ಯಾಸ್ ತುಂಬಿಸಿಕೊಳ್ಳಲು ಚಾಲಕರು ಕನಿಷ್ಠ 3 ರಿಂದ 4 ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ದಿನದ ಅರ್ಧದಷ್ಟು ಸಮಯ ರಸ್ತೆಯಲ್ಲೇ ವ್ಯಯವಾಗುತ್ತಿದ್ದು, ಚಾಲಕರ ದಿನದ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ.
ಆದಾಯವಿಲ್ಲದೆ ಕಂಗಾಲಾದ ಚಾಲಕರು ಬೆಳ್ಳಂಬೆಳಗ್ಗೆ ಗ್ಯಾಸ್‌ಗಾಗಿ ಸಾಲಿನಲ್ಲಿ ನಿಂತರೆ ಮಧ್ಯಾಹ್ನದವರೆಗೆ ಸಮಯ ಕಳೆದುಹೋಗುತ್ತದೆ. ಬಾಡಿಗೆ ಹೊಡೆಯಲು ಸಮಯವೇ ಸಿಗುತ್ತಿಲ್ಲ. ಆಟೋ ಸಾಲದ ಕಂತು ಮತ್ತು ಮನೆ ಬಾಡಿಗೆ ಕಟ್ಟುವುದೇ ಕಷ್ಟವಾಗಿದೆ ಎಂದು ಚಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಗ್ಯಾಸ್ ಅಭಾವದ ಹಿನ್ನೆಲೆಯಲ್ಲಿ ನಗರದ ರಸ್ತೆಗಳಲ್ಲಿ ಆಟೋಗಳ ಸಂಖ್ಯೆ ಕೂಡ ಕ್ಷೀಣಿಸಿದ್ದು, ಸಾರ್ವಜನಿಕರು ಆಟೋ ಸಿಗದೆ ಪರದಾಡುವಂತಾಗಿದೆ. ಕೆಲವು ಕಡೆಗಳಲ್ಲಿ ಚಾಲಕರು ಅನಿವಾರ್ಯವಾಗಿ ಹೆಚ್ಚಿನ ದರ ಕೇಳುತ್ತಿರುವುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ತೈಲ ಕಂಪನಿಗಳಿಂದ ಆಟೋಗ್ಯಾಸ್ ಪೂರೈಕೆಯಲ್ಲಿ ಉಂಟಾಗಿರುವ ತಾಂತ್ರಿಕ ವ್ಯತ್ಯಯವೇ ಈ ಅಭಾವಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಪೂರೈಕೆ ಸರಪಳಿಯಲ್ಲಿನ ಅಡಚಣೆಯಿಂದಾಗಿ ಬಂಕ್‌ಗಳಿಗೆ ಸಕಾಲಕ್ಕೆ ಸ್ಯಾಕ್ ತಲುಪುತ್ತಿಲ್ಲ. ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ತಕ್ಷಣವೇ ಮಧ್ಯಪ್ರವೇಶಿಸಿ ತೈಲ ಕಂಪನಿಗಳೊಂದಿಗೆ ಮಾತನಾಡಿ, ಪೂರೈಕೆಯನ್ನು ಸರಿಪಡಿಸಬೇಕು ಎಂಬುದು ಚಾಲಕರ ಒಕ್ಕೂಟಗಳ ಒತ್ತಾಯವಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.