ಬೆಂಗಳೂರು : ಬೆಂಗಳೂರಲ್ಲಿ ಘನಘೋರ ದುರಂತ ಸಂಭವಿಸಿದ್ದು, ಲಾರಿ ಹರಿದು ನಾಲ್ಕು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ದುರಂತ ನಡೆದಿದೆ. ಬೆಂಗಳೂರಿನ ಉತ್ತರ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತೇಗೌಡನ ಪಾಳ್ಯದಲ್ಲಿ ಘಟನೆ ನಡೆದಿದೆ.
ನಿಶಿಕಾ (4) ಮೃತ ಬಾಲಕಿ ಎಂದು ಗುರುತಿಸಲಾಗಿದೆ.ಯುಗಾದಿ ಹಬ್ಬ ಮುಗಿಸಿ ತಾಯಿ-ಮಗಳು ದೇವರ ದರ್ಶನಕ್ಕೆಂದು ದೇವಸ್ಥಾನಕ್ಕೆ ತೆರಳುತ್ತಿದ್ದರು. ಎರಡನೇ ಮಗು ಕಂಕುಳಲ್ಲಿ ಹಾಗೂ ಮೊದಲ ಮಗುವಿನ ಕೈ ಹಿಡಿದು ತೆರಳುತ್ತಿದ್ದ ವೇಳೆ ಎದುರಿಗೆ ಬರುತ್ತಿದ್ದ ಲಾರಿ ಏಕಾಏಕಿ ಮಗುವಿನ ಮೇಲೆ ಹರಿದಿದೆ.
ಅಪಘಾತದ ಪರಿಣಾಮ ಹೆತ್ತ ತಾಯಿಯ ಎದುರೇ ಬಾಲಕಿ ಪ್ರಾಣ ಹೋಗಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಶವಗಾರಕ್ಕೆ ರವಾನಿಸಲಾಗಿದೆ ಮನೆ ಮಗುವನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಇಡೀ ಮನೆಯಲ್ಲಿ ನೀರವ ಮೌನ ಆವರಿಸಿದೆ.