2026-03-07 05:22:06

Land Security Campaign Survey Department also achieves 1000 days of surgery | ಭೂ ಸುರಕ್ಷಾ ಅಭಿಯಾನ ಸರ್ವೇ ಇಲಾಖೆಗೂ ಸರ್ಜರಿ 1000 ದಿನದ ಸಾಧನೆ ಕೃಷ್ಣ ಬೈರೇಗೌಡ | Speed News Kannada

Land Security Campaign Survey Department also achieves 1000 days of surgery | ಭೂ ಸುರಕ್ಷಾ ಅಭಿಯಾನ ಸರ್ವೇ ಇಲಾಖೆಗೂ ಸರ್ಜರಿ 1000 ದಿನದ ಸಾಧನೆ ಕೃಷ್ಣ ಬೈರೇಗೌಡ | Speed News Kannada

ಬೆಂಗಳೂರು: ಭೂ ಸುರಕ್ಷಾ ಅಭಿಯಾನ, ಸರ್ವೇ ಇಲಾಖೆಗೂ ಸರ್ಜರಿ ಸೇರಿದಂತೆ ಎಲ್ಲಾ ಕಂದಾಯ ಸೇವೆಗಳನ್ನೂ ಆನ್‌ ಲೈನ್ ಡಿಜಿಟಲೀಕರಣ ಮಾಡಿದ್ದು ಆ ಮೂಲಕ ಇಲಾಖೆಯ ಹತ್ತಾರು ಪ್ರಮುಖ ಸೇವೆಗಳನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಿದ್ದು ನಮ್ಮ ಸಾವಿರ ದಿನಗಳ ಆಡಳಿತದ ಸಾಧನೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ವಿಕಾಸಸೌಧದಲ್ಲಿಇಂದು ನಡೆದ ಎಲ್ಲಾ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. 
ಭೂ ಸುರಕ್ಷಾ ಅಭಿಯಾನ:
ಭೂ ಸುರಕ್ಷಾ ಅಭಿಯಾನದ ಅಡಿಯಲ್ಲಿ ಈವರೆಗೆ 71.19 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸಲಾಗಿದೆ. ಇನ್ನೂ 30 ಕೋಟಿ ಪುಟಗಳ ಸ್ಕ್ಯಾನ್ ಮಾಡುವ ಕೆಲಸ ಬಾಕಿ ಇದ್ದು, ಪ್ರತಿ ದಿನ ಸುಮಾರು 17,500 ಲಕ್ಷ ಪುಟ ಸ್ಕ್ಯಾನ್ ಮಾಡಲಾಗುತ್ತಿದೆ. ಈ ವರ್ಷದ ಏಪ್ರಿಲ್  ಕೊನೆಯ ಒಳಗೆ ಈ ಕೆಲಸವನ್ನು ಮುಗಿಸಬೇಕು. ಈಗಾಗಲೇ ಜನ ಸಾಮಾನ್ಯರಿಗೆ 52,70 ಲಕ್ಷ ಪುಟಗಳನ್ನು ಆನ್ಲೈನ್ ಮೂಲಕ ವಿತರಿಸಲಾಗಿದ್ದು, ಶೀಘ್ರದಲ್ಲಿ ಎಲ್ಲಾ ಭೂ ದಾಖಲೆಗಳೂ ಆನ್ಲೈನ್ ಮೂಲಕ ವಿತರಿಸುವಂತಾಗಬೇಕು” ಎಂದು ತಾಕೀತು ಮಾಡಿದರು.  
“ಕೆಲವರಿಗೆ ದಾಖಲೆ ಕಳೆದುಹೋಗಿದೆ ಎಂದು ಬರೆದುಕೊಡುವ ಚಾಲಿ ಇದೆ. ಅಲ್ಲದೆ, ದಾಖಲೆಗಳನ್ನು ತಿದ್ದುವ ಕೆಲಸಗಳೂ ಈ ಹಿಂದೆ ಎಗ್ಗಿಲ್ಲದೆ ನಡೆದಿದ್ದು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಇಂತಹ ಪ್ರವೃತ್ತಿಗೆ ತಡೆಯೊಡ್ಡಬೇಕು, ಮೂಲ ದಾಖಲೆಗಳು ಕಳೆದು ಹೋಗದಂತೆ ಹಾಗೂ ನಶಿಸಿ ಹೋಗದಂತೆ ಸಂರಕ್ಷಿಸಬೇಕು ಎಂಬ ಉದ್ದೇಶದಿಂದ ಈ ಅಭಿಯಾನವನ್ನು ಆರಂಭಿಸಲಾಗಿದ್ದು, ರೈತರು ತಮಗೆ ಯಾವ ದಾಖಲೆ ಬೇಕಿದ್ದರೂ ಆನ್ಲೈನ್ನಲ್ಲಿ ಸರ್ಚ್ ಮಾಡಿ ಅವರೇ ವೆರಿಫೈ ದಾಖಲೆ ಪಡೆಯುವಂತಾದರೆ ನಮ್ಮ ಉದ್ದೇಶ ಈಡೇರುತ್ತದೆ” ಎಂದರು.
ಸರ್ವೇ ಇಲಾಖೆಗೂ ಸರ್ಜರಿ:
ಸರ್ವೇ ಇಲಾಖೆಗೂ ಚಿಕಿತ್ಸಕ ಬದಲಾವಣೆ ನೀಡುವ ಉದ್ದೇಶದಿಂದ ಇಡೀ ಇಲಾಖೆಯನ್ನು ಡಿಜಿಟಲೀಕರಣಗೊಳಿಸುವ ಸಂಬಂಧ ನೂತನ ಕಾರ್ಯ ಯೋಜನೆಯನ್ನು ಇಂದಿನ ಸಭೆಯಲ್ಲಿ ಸರ್ವೇ ಇಲಾಖೆ ನೂತನ ಆಯುಕ್ತರಾದ ವೆಂಕಟರಾಜು ಅವರು ಪ್ರಸ್ತುತಪಡಿಸಿದರು.  
ಪ್ರಸ್ತುತಿ ನಂತರ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡರು, “ರೋವರ್ ಮೂಲಕ ಸರ್ವೇ ಪೂರ್ಣಗೊಳಿಸಿದರೆ  ಸ್ಕೆಚ್, ಟಿಪ್ಪಣಿ, ಆಖಾರ್ ಬಂದ್ , ಕೈಬರಹ ಸೇರಿ ಪ್ರತಿಯೊಂದೂ ಡಿಜಿಟಲ್ ಪ್ರತಿ ಲಭ್ಯವಾಗುತ್ತದೆ. ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಆ ಮೂಲಕ ಈ ವರ್ಷಾಂತ್ಯದಲ್ಲಿ ಇಡೀ ಇಲಾಖೆಯನ್ನು ಸಂಪೂರ್ಣ ಕಾಗದ ರಹಿತಗೊಳಿಸಬೇಕು, ಎಂಡ್ ಟು ಎಂಡ್ ಡಿಜಿಟಲೀಕರಣಗೊಳಿಸಬೇಕು” ಎಂದು ಸೂಚಿಸಿದರು.
ಸಾವಿರ ದಿನಗಳ ಸವಾಲಿನ ಹಾದಿ...!:
“ಕಳೆದ ಸಾವಿರ ದಿನಗಳಲ್ಲಿ ಪೋಡಿ ದುರಸ್ತಿ, ಭೂ ಸುರಕ್ಷಾ, ಫೌತಿ ಖಾತೆ ಅಭಿಯಾನ, ಇ-ಆಫೀಸ್ ಸೇರಿದಂತೆ ಅನೇಕ ಗಮನೀಯ ಕೆಲಸಗಳಾಗಿವೆ. ಆದರೆ, ಈ ಯಾವ ಕೆಲಸವೂ ಸಲೀಸಾಗಿ ಆಗಿಲ್ಲ. ಸಾಕಷ್ಟು ಪರಿಶ್ರಮದ ಫಲವಾಗಿ ನಾವು ಇಷ್ಟು ದೂರ ಕ್ರಮಿಸಿದ್ದೇವೆ. ಇಲಾಖೆಯಲ್ಲಿ ಬದಲಾವಣೆ ಪರಿವರ್ತನೆ ಆರಂಭ ಮಾಡಿದ್ದಾಗ ಏನೇನು ಕೆಲಸ ಬಾಕಿ ಉಳಿದಿದೆ ಎಂಬ ಮಾಹಿತಿಯೇ ಇರಲಿಲ್ಲ. ಅಲ್ಲಿಂದ ಆರಂಭವಾಗಿ ಈಗ ಸಾಕಷ್ಟು ಆನ್ಲೈನ್ ಟ್ರಾಕಿಂಗ್ ಡಿವೈಸ್ ಅನ್ನು ಅಭಿವೃದ್ಧಿ ಮಾಡಿದ್ದೇವೆ. ಆ ಮೂಲಕ ಎಷ್ಟು ಜನರ ಕೆಲಸ ಬಾಕಿ ಇದೆ? ಎಷ್ಟು ಅರ್ಜಿ ಬಾಕಿ ಇದೆ? ಎಷ್ಟು ಕೇಸ್ ಗಳು ಬಾಕಿ ಇವೆ? ಆರ್ಆರ್ಟಿ ಕರೆಕ್ಷನ್  ಎಷ್ಟು ಬಾಕಿ ಇದೆ? ಫೌತಿಖಾತೆ ಎಷ್ಟು ಬಾಕಿ ಇದೆ? ಹೀಗೆ ಎಲ್ಲಾ ಮಾಹಿತಿಯೂ ಈಗ ಬೆರಳ ತುದಿಯಲ್ಲಿದೆ” ಎಂದು ಸಂತಸ ವ್ಯಕ್ತಪಡಿಸಿದರು.
“ಈ ಹಿಂದೆ ಯಾವ ಅಧಿಕಾರಿಯ ಬಳಿ ಎಷ್ಟು ಫೈಲ್ ಬಾಕಿ ಇದೆ ಎಂಬ ಮಾಹಿತಿಯೂ ನಮ್ಮಲ್ಲಿ ಇರಲಿಲ್ಲ. ಅಂತಹ ಪರಿಸ್ಥಿತಿಯಿಂದ ಕೇವಲ ಸಾವಿರ ದಿನದಲ್ಲಿ ಎಲ್ಲಾ ಕೆಲಸವನ್ನೂ ಆನ್ಲೈನ್ ಗೆ ತರಲಾಗಿದೆ. ಈಗ ಎಲ್ಲವೂ ಆನ್ಲೈನ್ ಆಗಿದೆ. ಇದನ್ನು ಸಾಧ್ಯವಾಗಿಸಲು ಎಲ್ಲಾ ಅಧಿಕಾರಿಗಳ ಪರಿಶ್ರಮವೂ ಗಮನೀಯ. ಆರಂಭದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಟಪಾಲು ವಿಭಾಗದಲ್ಲಿ ಸ್ವೀಕರಿಸುವ ಅರ್ಜಿಗಳೇ ಇ-ಆಫೀಸ್ ಮೂಲಕ ದಾಖಲಾಗಲಿ ಎಂದಾಗ ಎಲ್ಲರೂ ದಿಗ್ಭ್ರಮೆಗೊಂಡಿದ್ದರು. ಈಗ ವಿಎ ಯಿಂದ  ಸರ್ವೇಯರ್ ವರೆಗೆ ಎಲ್ಲವೂ ಇ-ಆಫೀಸ್ ನಲ್ಲೇ ಆಡಳಿತ ನಡೆಯುತ್ತಿದೆ. ಅಲ್ಲಿಂದ ಇಲ್ಲಿಯವರೆಗಿನ ಪ್ರಯಾಣದಲ್ಲಿ ತುಂಬಾ ಅಧಿಕಾರಿಗಳ ಪರಿಶ್ರಮ ಇದೆ. ತುಂಬಾ ಜಿಲ್ಲಾಧಿಕಾರಿಗಳು ಪರಿಶ್ರಮಪಟ್ಟಿದ್ದಾರೆ. ಆ ಎಲ್ಲಾ ಅಧಿಕಾರಿಗಳಿಗೂ ಧನ್ಯವಾದಗಳು” ಎಂದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಮೌನಿಶ್ ಮುದ್ಗಿಲ್, ಕಂದಾಯ ಆಯುಕ್ತರಾದ ಮೀನಾ ನಾಗರಾಜ್, ಭೂ ದಾಖಲೆಗಳು ಮತ್ತು ಸರ್ವೆ ಇಲಾಖೆಯ ಆಯುಕ್ತರಾದ ವೆಂಕಟರಾಜು ಉಪಸ್ಥಿತರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.