2026-05-28 10:24:51

ಡೇಟಿಂಗ್‌ ಆಪ್‌ ನಲ್ಲಿ ಪರಿಚಯವಾದ ಯುವತಿ ನಂಬಿ ಟೆಕ್ಕಿ ಕಳೆದುಕೊಂಡಿದ್ದು ರೂ. 1.66 ಕೋಟಿ |Speed News Kannada

ಡೇಟಿಂಗ್‌ ಆಪ್‌ ನಲ್ಲಿ ಪರಿಚಯವಾದ ಯುವತಿ ನಂಬಿ ಟೆಕ್ಕಿ ಕಳೆದುಕೊಂಡಿದ್ದು ರೂ. 1.66 ಕೋಟಿ |Speed News Kannada

ಬೆಂಗಳೂರು: ಡೇಟಿಂಗ್‌ ಆ್ಯಪ್‌ ನಲ್ಲಿ ಪರಿಚಯವಾದ ಯುವತಿಯೊಬ್ಬಳ ಮಾತು ನಂಬಿ ಸಾಫ್ಟ್ ವೇರ್‌ ಎಂಜಿನಿಯರ್‌ ಒಬ್ಬರು ಬರೋಬ್ಬರಿ ರೂ. 1.66 ಕೋಟಿ ಕಳೆದುಕೊಂಡಿದ್ದಾರೆ. ಸುಂದರವಾಗಿದ್ದ ಈ ಯುವತಿ ತನ್ನನ್ನು ವಿವಾಹವಾಗುತ್ತಾಳೆ ಎಂದು ನಂಬಿ ಹಣ ಕಳೆದು ಕೊಂಡವರು ಸಾಫ್ಟ್ ವೇರ್‌ ಎಂಜಿನಿಯರ್‌ ಸೌರವ್‌ ದುಬೆ.
ಫೆಬ್ರವರಿಯಲ್ಲಿ ಸೌರವ್‌ ದುಬೆಗೆ ಟಂಟನ್‌ ಎಂಬ ಡೇಟಿಂಗ್‌ ಆ್ಯಪ್‌ನಲ್ಲಿ ರಿಯಾ ಅಗರ್‌ ವಾಲ್‌ ಎಂಬ ಹೆಸರಿನ ಯುವತಿಯ ಪರಿಚಯವಾಗಿದೆ. ಚಾಟಿಂಗ್‌ ಮೂಲಕ ಇಬ್ಬರ ನಡುವೆ ಅನ್ಯೋನ್ಯತೆ ಬೆಳೆದಿದೆ. ಪರಿಚಯ ಸ್ನೇಹಕ್ಕೆ ತಿರುಗಿದಾಗ ರಿಯಾ ಸೌರವ್‌ ಮೊಬೈಲ್‌ ನಂಬರನ್ನು ಪಡೆದುಕೊಂಡಿದ್ದಾಳೆ. ಪ್ರತಿದಿನ ವಿಡಿಯೋ ಕಾಲ್‌ ಮಾಡುವ ಮೂಲಕ ಆತನನ್ನು ಮರಳು ಮಾಡಿದ್ದಾಳೆ. ನಂತರ ಮದುವೆಯಾಗುವುದಾಗಿಯೂ ನಂಬಿಸಿದ್ದಾಳೆ.
ತನ್ನನ್ನು ಸಂಪೂರ್ಣವಾಗಿ ನಂಬಿದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡ ರಿಯಾ ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸಬಹುದೆಂಬ ಆಮಿಷವೊಡ್ಡಿದ್ದಾಳೆ. ಮದುವೆಯಾಗುವ ಹುಡುಗಿ ಎಂದು ನಂಬಿದ ಸೌರವ್‌ ಮೂರು ತಿಂಗಳ ಅವಧಿಯಲ್ಲಿ ಹಂತಹಂತವಾಗಿ ವಿವಿಧ ಬ್ಯಾಂಕ್‌ ಖಾತೆಗಳ ಮೂಲಕ ತಾನು ಸಂಪಾದಿಸಿದ್ದ ರೂ. 1.66 ಕೋಟಿ ಹಣ ಹೂಡಿಕೆ ಮಾಡಿದ್ದಾರೆ. ಕೆಲವು ದಿನಗಳ ನಂತರ ಅನುಮಾನಗೊಂಡ ಸೌರವ್‌ ತನಗೆ ಬರಬೇಕಾದ ಲಾಭಾಂಶ ಹಾಗೂ ಹೂಡಿಕೆ ಮಾಡಿರುವ ಅಸಲು ವಾಪಸ್‌‍ ಕೊಡುವಂತೆ ರಿಯಾ ಬಳಿ ಕೇಳಿದ್ದಾರೆ.

ಸೌರವ್‌ ಹಣಕ್ಕಾಗಿ ಒತ್ತಾಯಿಸಲು ಆರಂಭಿಸಿದಾಗ ರಿಯಾ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದಾಳೆ. ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ.

ಕೂಡಲೇ ಸೌರವ್‌ ಆಗ್ನೇಯ ವಿಭಾಗದ ಸೆನ್‌ ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.