2026-03-07 12:55:09

Kumaraswamy discusses with entrepreneurs on development of EV sector in the state | ರಾಜ್ಯದಲ್ಲಿ ಇವಿ ವಲಯದ ಅಭಿವೃದ್ಧಿ ಕುರಿತು ಉದ್ಯಮಿಗಳ ಜತೆ ಸಚಿವ ಕುಮಾರಸ್ವಾಮಿ ಚರ್ಚೆ | Speed News Kannada

Kumaraswamy discusses with entrepreneurs on development of EV sector in the state | ರಾಜ್ಯದಲ್ಲಿ ಇವಿ ವಲಯದ ಅಭಿವೃದ್ಧಿ ಕುರಿತು ಉದ್ಯಮಿಗಳ ಜತೆ ಸಚಿವ ಕುಮಾರಸ್ವಾಮಿ ಚರ್ಚೆ | Speed News Kannada

ಬೆಂಗಳೂರು: ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿ ಹಾಗೂ ಅದಕ್ಕೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುವ ದಿಸೆಯಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿ (FKCCI) ಅಧ್ಯಕ್ಷರು,  ಪದಾಧಿಕಾರಿಗಳು ಮತ್ತು ಕೈಗಾರಿಕೋದ್ಯಮಿಗಳ ಜತೆ ಮಹತ್ವದ ಸಭೆ ನಡೆಸಿದರು.
ನಗರದ ಹೆಚ್ ಎಂಟಿ ಭವನದಲ್ಲಿರುವ ಸಚಿವರ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ; ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ವಿಸ್ತರಣೆಗೆ ಇರುವ ವಿಪುಲ ಅವಕಾಶಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ₹500 ಕೋಟಿ ವೆಚ್ಚದಲ್ಲಿ ಜಾಗತಿಕ ಮಟ್ಟದ ARAI (ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್‌ ಆಫ್ ಇಂಡಿಯಾ) ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ, ನಾನೇ ಪತ್ರ ಬರೆದಿದ್ದೇನೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಈ ತರಬೇತಿ ಕೇಂದ್ರಕ್ಕೆ ಕಳೆದ ಬಜೆಟ್ ನಲ್ಲಿ ₹500 ಕೋಟಿ ಮೀಸಲಿಡಲಾಗಿದೆ. ಅಗತ್ಯಬಿದ್ದರೆ ಇನ್ನೂ ₹500 ಕೋಟಿ ಹೂಡಿಕೆ ಮಾಡಲು ಕೇಂದ್ರ ತಯಾರಿದೆ ಎಂದು ಸಭೆಯ ಗಮನಕ್ಕೆ ತಂದರು.
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಸಂಶೋಧನೆ, ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು. ಸಾರಿಗೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಮಟ್ಟಕ್ಕೆ ಇಳಿಸಿ ಪರಿಸರ ಪೂರಕ ಸಾರಿಗೆ ವ್ಯವಸ್ಥೆ ರೂಪಿಸುವ ದೃಢ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೊಂದಿದ್ದಾರೆ. ಅವರ ಕನಸು ನನಸು ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಕಂಪನಿಗಳು ಕರ್ನಾಟಕದಲ್ಲಿ ಹುಟ್ಟಿಕೊಳ್ಳುತ್ತಿವೆ, ಆದರೆ ಬೇರೆ ರಾಜ್ಯಗಳಲ್ಲಿ ಉತ್ಪಾದನೆ ಮಾಡುತ್ತಿವೆ. ಇಂಥ ಪರಿಸ್ಥಿತಿಯಿಂದ ಕರ್ನಾಟಕವನ್ನು ಹೊರತರಬೇಕಿದೆ. ಅದಕ್ಕೆ ARAI ಕೇಂದ್ರ ದೊಡ್ಡ ಮಟ್ಟದ ಕೊಡುಗೆ ನೀಡುತ್ತದೆ. ಆಟೋಮೊಬೈಲ್ ಪರೀಕ್ಷಾ ಕೇಂದ್ರ ಬರುವುದರ ಜತೆಗೆ ಆ ಮೂಲಕ ಸಂಶೋಧನೆ, ಉತ್ಪಾದನೆಗೂ ಮುಂದಿನ ದಿನಗಳಲ್ಲಿ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು.
ಸ್ಥಳೀಯ ಮಟ್ಟದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಆಗಬೇಕು ಎಂಬುದು ಪ್ರಧಾನಿಗಳ ದೂರದೃಷ್ಟಿ. ಆ ನಿಟ್ಟಿನಲ್ಲಿ ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಪರಿಕಲ್ಪನೆಗಳ ಅಡಿಯಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ತೇಜನ ನೀಡುತ್ತಿದ್ದೇವೆ. ರಾಜ್ಯದಲಿ ARAI ಪರೀಕ್ಷಾ ಕೇಂದ್ರ ಸ್ಥಾಪನೆ ಆದರೆ ಸಾವಿರಾರು ಸಂಖ್ಯೆಯಷ್ಟು ಉದ್ಯೋಗ ಸೃಷ್ಟಿ ಆಗುವುದಷ್ಟೇ ಅಲ್ಲದೆ, ಪರೋಕ್ಷ ಉದ್ಯೋಗಗಳನ್ನು ಬೃಹತ್ ಪ್ರಮಾಣದಲ್ಲಿ ಸೃಷ್ಟಿಸಿ ದೊಡ್ಡ ಮಟ್ಟದ ಆಟೋ ಇಕೋ ಸಿಸ್ಟಮ್ ನಿರ್ಮಾಣಕ್ಕೆ ನಾಂದಿ ಹಾಡುತ್ತದೆ. ಹೀಗಾಗಿ ಈ ಯೋಜನೆಗೆ ರಾಜ್ಯ ಸರ್ಕಾರದ ಸಹಕಾರವನ್ನು ಕೋರಿದ್ದೇವೆ ಎಂದು ಅವರು ಹೇಳಿದರು.
ಎಫ್ ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ, ಹಿರಿಯ ಉಪಾಧ್ಯಕ್ಷ ಟಿ. ಸಾಯಿರಾಂ ಪ್ರಸಾದ್, ಉಪಾಧ್ಯಕ್ಷ ಬಿ.ಪಿ. ಶಶಿಧರ್, ಗ್ರೀನ್ ಎನರ್ಜಿ ಸಮಿತಿ ಅಧ್ಯಕ್ಷ ರಮೇಶ್ ಶಿವಣ್ಣ, ಮಾಜಿ ಅಧ್ಯಕ್ಷರಾದ ಎಸ್. ಸಂಪತ್ ರಾಮನ್, ಆರ್. ಶಿವಕುಮಾರ್, ಕೆ. ಶಿವಷಣ್ಮುಗಂ, ಎಲ್. ಲಕ್ಷ್ಮಣ ಸೇರಿದಂತೆ ಕೈಗಾರಿಕೋದ್ಯಮಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.