ಬೆಂಗಳೂರು: ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ 4 ಸಾರಿಗೆ ನಿಗಮಗಳ ನೌಕರರ ವೇತನವನ್ನು ಶೇ.12.5 ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ. ಆದರೆ ಸಾರಿಗೆ ನೌಕರರು ಈ ಹೆಚ್ಚಳವನ್ನು ಒಪ್ಪಿಕೊಂಡಿಲ್ಲ. ನಮ್ಮ ಬೇಡಿಕೆಯಂತೆ ಶೇ. 25ರಷ್ಟು ವೇತನ ಹೆಚ್ಚಳಕ್ಕೆ ಪಟ್ಟು ಹಿಡಿದಿರುವ ಅವರು ಮುಷ್ಕರಕ್ಕೆ ಅಣಿಯಾಗುತ್ತಿದ್ದಾರೆ.
ಸರ್ಕಾರದ ನಿರ್ಧಾರ ಕುರಿತು ಎಐಟಿಯುಸಿ ಕಚೇರಿಯಲ್ಲಿ ಇಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಸಭೆ ನಡೆದಿದ್ದು ಮೇ 20ರಂದು ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಹೀಗಾಗಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ.
ಸಭೆ ನಂತರ ಮಾತನಾಡಿದ ಸಾರಿಗೆ ನೌಕರರ ಮುಖಂಡ ವಿಜಯ್ ಭಾಸ್ಕರ್, ಸರ್ಕಾರ ಕೇವಲ ಶೇ.12.50ರಷ್ಟು ವೇತನ ಹೆಚ್ಚಿಸಿದೆ. ನಮ್ಮ ಜೊತೆ ಚರ್ಚಿಸದೆ ಏಕಾಏಕಿ ಈ ಆದೇಶ ಹೊರಡಿಸಿದೆ. ಶೇ. 25ರಷ್ಟು ವೇತನ ಹೆಚ್ಚಳಕ್ಕೆ ನಮ್ಮ ಬೇಡಿಕೆ ಇದ್ದು ಹಿಂದೆ ಸರಿಯುವುದಿಲ್ಲ. ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮೇ 20ರಂದು ಮುಷ್ಕರಕ್ಕೆ ಕರೆ ನೀಡಿದ್ದು, ಅಂದು ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲ. ಸಾರ್ವಜನಿಕರು ನಮಗೆ ಸಹಕಾರ ಕೊಡಬೇಕು ಎಂದು ಕೋರಿದ್ದಾರೆ.
ಈಗಾಗಲೇ ಎರಡು ಸಮಾವೇಶ ಮಾಡಿದ್ದೇವೆ. ಸಾರಿಗೆ ನೌಕರರಲ್ಲಿ ಒಮ್ಮತ ಇದೆ.2024 ರಿಂದಲೂ ಸಂಬಳ ಹೆಚ್ಚಳಕ್ಕೆ ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದೇವೆ. ಎಸ್ಮಾ ಜಾರಿ ಮಾಡಿದರೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.
ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ದೇವರಾಜ್ ಅರಸು ಮಾತನಾಡಿ, ಕೇವಲ ಶೇ. 12.50ರಷ್ಟು ವೇತನ ಹೆಚ್ಚಳವನ್ನು ಒಪ್ಪುವುದಿಲ್ಲ. 2024ರ ಜ.1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡಬೇಕು. 38 ತಿಂಗಳ ವೇತನ ಹಿಂಬಾಕಿ ಸಹ ನೀಡಬೇಕು ಎಂದು ಒತ್ತಾಯಿಸಿದರು.