2026-07-23 06:12:59

Krishna Byre Gowda | ದಾಖಲೆ ಪ್ರಮಾಣದಲ್ಲಿ ಎಸಿ‌ ಕೋರ್ಟ್ ಪ್ರಕರಣಗಳ ಇತ್ಯರ್ಥ ಕಂದಾಯ ಸಚಿವ ಕೃಷ್ಣಬೈರೇಗೌಡ | Speed News Kannada

Krishna Byre Gowda | ದಾಖಲೆ ಪ್ರಮಾಣದಲ್ಲಿ ಎಸಿ‌ ಕೋರ್ಟ್ ಪ್ರಕರಣಗಳ ಇತ್ಯರ್ಥ ಕಂದಾಯ ಸಚಿವ ಕೃಷ್ಣಬೈರೇಗೌಡ | Speed News Kannada

ಬೆಂಗಳೂರು: ಅಸಾಧ್ಯ ಎನ್ನಲಾಗುತ್ತಿದ್ದ ಎಸಿ ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಇಂದು ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಸಿಕ ಪ್ರಗತಿ ಪರಿಶೀಲನೆ ನಡೆಸಿ ನಂತರ ಅವರು ಮಾತನಾಡಿದರು.
ಎಸಿ ನ್ಯಾಯಾಲಯಗಳಲ್ಲಿ ಅವಧಿ ಮೀರಿದ 62,857 ತಕರಾರು ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿರಲಿಲ್ಲ. ಜತೆಗೆ 11,000 ಪ್ರಕರಣಗಳನ್ನು ಆರ್‌ಸಿಸಿಎಂಎಸ್‌ನಲ್ಲಿ ದಾಖಲು ಮಾಡಿರಲಿಲ್ಲ. ಇವೆಲ್ಲವೂ ಸೇರಿ 73,000 ಪ್ರಕರಣಗಳ ಬಾಕಿ ಇದ್ದವು. ಇತ್ಯರ್ಥವನ್ನು ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಸಹಕಾರದಿಂದ ಬಾಕಿ ಇರುವಪ್ರಕರಣಗಳ ಸಂಖ್ಯೆ 10,656ಕ್ಕೆ ಇಳಿಸಲಾಗಿದೆ ಎಂದು ಹೇಳಿದರು.
ನಾನು ಸಚಿವನಾದ ನಂತರ ಈ ಎಲ್ಲ ಪ್ರಕರಣಗಳಿಗೂ ತಾರ್ಕಿಕ ಅಂತ್ಯ ನೀಡಿ, ಶೀಘ್ರ ವಿಲೇವಾರಿ ಮಾಡಲಾಗುವುದು ಎಂದು ಭರವಸೆ ನೀಡಿದ್ದೆ. ಪ್ರತಿಪಕ್ಷದ ನಾಯಕರು ಮತ್ತು ಆಡಳಿತ ಪಕ್ಷದ ನಾಯಕರೂ ಈ ಕೆಲಸ ಅಸಾಧ್ಯ ಎಂದಿದ್ದರು. ಆದರೆ ಇಂದು ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಸಹಕಾರದಿಂದ ಈ ಕೆಲಸ ಸಾಧ್ಯವಾಗಿದೆ. ಈ ಮೂಲಕ ಸಾರ್ವಜನಿಕರು ಸರ್ಕಾರಿ ಕಚೇರಿಗೆ ಅಲೆಯುವುದು ತಪ್ಪಿದಂತಾಗಿದೆ ಎಂದರು.
ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲೇ ಅಧಿಕ ಸಂಖ್ಯೆಯ ಪ್ರಕರಣಗಳು ಬಾಕಿ ಉಳಿದುಕೊಂಡಿವೆ. ಈ ಪ್ರಕರಣಗಳನ್ನೂ ಮಾರ್ಚ್ ಅಂತ್ಯದ ವೇಳೆಗೆ ವಿಲೇವಾರಿಗೊಳಿಸಬೇಕು. ಯಾವುದೇ ಹಳೆಯ ಪ್ರಕರಣ ಬಾಕಿ ಉಳಿಯಬಾರದು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಹಿಂದೆ ಎಸಿ ನ್ಯಾಯಾಲಯಗಳ ಆದೇಶಗಳನ್ನು ಆರ್‌ಸಿಸಿಎಂಎಸ್‌ ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸುವ ಪ್ರವೃತ್ತಿ ಇರಲಿಲ್ಲ. ಇದರಿಂದ ಕೆಲ ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಆದೇಶ ನೀಡಿರುವುದು ಬೆಳಕಿಗೆ ಬಂದಿತ್ತು. ಎಸಿ ಆದೇಶಗಳನ್ನು ನ್ಯಾಯಬದ್ಧಗೊಳಿಸುವ ನಿಟ್ಟಿನಲ್ಲಿ ಈ ಹಿಂದಿನ ಎಲ್ಲ ಶಂಕಾಸ್ಪದ ಆದೇಶಗಳನ್ನು ಮರು ಪರಿಶೀಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.