2026-06-08 02:17:17

Khameneis assassination | ಖಮೇನಿ ಹತ್ಯೆ ಆಲಿಪುರದಲ್ಲಿ ಶೋಕಾಚರಣೆ ಏನೀ ಸಂಬಂಧ | Speed News Kannada

Khameneis assassination | ಖಮೇನಿ ಹತ್ಯೆ ಆಲಿಪುರದಲ್ಲಿ ಶೋಕಾಚರಣೆ ಏನೀ ಸಂಬಂಧ | Speed News Kannada

ಗೌರಿಬಿದನೂರು: ಇಸ್ರೇಲ್-ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತುಲ್ಲಾ ಖಮೇನಿ ಹತ್ಯೆಯಾಗಿದ್ದಾರೆ. ಎತ್ತಣ ಮಾಮರ ಎತ್ತಣ ಕೋಗಿಲೆ ಎನ್ನುವಂತೆ ದೂರದ ಇರಾನ್‌ ನಾಯಕ ಖಮೇನಿ ನಿಧನಕ್ಕೆ ರಾಜ್ಯದ ಗೌರಿಬಿದನೂರು ತಾಲ್ಲೂಕಿನ ಅಲಿಪುರ ಗ್ರಾಮದ ಶಿಯಾ ಸಮುದಾಯ ಮಮ್ಮಮ ಮರುಗುತ್ತಿದೆ. ಗ್ರಾಮದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ನಡೆಯುತ್ತಿದೆ.
ಅಲಿಪುರದ ಗ್ರಾಮದಲ್ಲಿ ಖಮೇನಿ ಸಮುದಾಯದ ಶಿಯಾ ಮುಸ್ಲಿಮರು ಸುಮಾರು 25 ಸಾವಿರದಷ್ಟಿದ್ದಾರೆ.
ಗ್ರಾಮಸ್ಥರು ಖಮೇನಿ ಹತ್ಯೆ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ, ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಶೋಕಾಚರಣೆ ಆಚರಿಸಿದರು. ಅಮೇರಿಕ ಮತ್ತು ಇಸ್ರೇಲ್‌ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಪ್ಪು ಬಟ್ಟೆ ಧರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ ನಾಗರೀಕರು ಅಮೇರಿಕ ಹಾಗೂ ಇಸ್ರೇಲ್ ವಿರುದ್ದ ದಿಕ್ಕಾರ ಕೂಗಿ ಖಮೇನಿ ಅವರದ್ದು ಹತ್ಯೆಯಲ್ಲ ಇದು ಬಲಿದಾನ; ಇದು ಅಂತ್ಯ ಅಲ್ಲ ಆರಂಭ ಎಂದು ಕೂಗಿದರು.
ಗ್ರಾಮಕ್ಕೆ ಭೇಟಿ ನೀಡಿದ್ದ ಖಮೇನಿ
1981ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಖಮೇನಿ ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಆಗ ಅವರಿನ್ನೂ ಇರಾನಿನ ಪರಮೋಚ್ಚ ನಾಯಕ ಆಗಿರಲಿಲ್ಲ. 
ಇರಾನ್‌ ನೆರವಿನೊಂದಿಗೆ ಅಲಿಪುರದಲ್ಲಿ ನಿರ್ಮಿಸಲಾದ ಆಸ್ಪತ್ರೆಯನ್ನು ಖಮೇನಿ ಉದ್ಘಾಟಿಸಿದ್ದರು. ಬಳಿಕ ಅಲ್ಲಿಯ ವಿದ್ವಾಂಸರು ಮತ್ತು ನಿವಾಸಿಗಳೊಂದಿಗೆ ಸಮಯ ಕಳೆದಿದ್ದರು. ಇಲ್ಲಿನ ಸುಮಾರು 25ಸಾವಿರಕ್ಕೂ ಅಧಿಕ ಶಿಯಾ ಮುಸ್ಲಿಂ ಪಂಗಡದವರು ಖಮೇನಿಯವರನ್ನು ತಮ್ಮ ಧರ್ಮಗುರು ಎಂದು ಭಾವಿಸುತ್ತಾರೆ.
ಅಲಿಪುರ ಹೇಗಿದೆ?
ಅಲಿಪುರ ಒಂದು ಸಣ್ಣ ಹಳ್ಳಿ.  ಶಿಯಾ ಸಂಸ್ಕೃತಿಯನ್ನು ಆಚರಿಸುತ್ತಾ ಭಾರತದಲ್ಲಿ ನೆಲೆಗೊಂಡಿರುವ ಈ ಗ್ರಾಮವು ತನ್ನ ವಿಶಿಷ್ಟ ಲಕ್ಷಣಕ್ಕಾಗಿ ಗಮನ ಸೆಳೆದಿದೆ. ಇದರ ಬಹುಪಾಲು ನಿವಾಸಿಗಳು ಶಿಯಾ ಮುಸ್ಲಿಮರು, 30,000 ಕ್ಕೂ ಹೆಚ್ಚು ಜನರಿದ್ದಾರೆ. ಇಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಜನಸಂಖ್ಯೆಯು ಅಲ್ಪಸಂಖ್ಯಾತವಾಗಿದೆ.
ಅಲಿಪುರ ಧಾರ್ಮಿಕ ವೈವಿಧ್ಯತೆ ಮತ್ತು ಸಾಮರಸ್ಯಕ್ಕೆ ಹೆಸರಾಗಿದೆ. ಮಸೀದಿಗಳು, ಅಶುರ್ ಖಾನಗಳು, ದೇವಾಲಯಗಳು ಮತ್ತು ಚರ್ಚ್‌ನಂತಹ ವಾಸ್ತುಶಿಲ್ಪದ ಅದ್ಭುತಗಳನ್ನು ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ, ಇದು ಜಿಲ್ಲೆಯ ಶೈಕ್ಷಣಿಕ ಕೇಂದ್ರವಾಗಿ ಮಾರ್ಪಟ್ಟಿದೆ, ಇಲ್ಲಿ ಹಲವಾರು ಶಾಲಾ ಕಾಲೇಜುಗಳಿವೆ. ಹಿಂದೂಗಳು, ಕ್ರಿಶ್ಚಿಯನ್ನರು ಮತ್ತು ಇತರ ಸಣ್ಣ ಮುಸ್ಲಿಂ ಪಂಗಡಗಳ ವೈವಿಧ್ಯಮಯ ಜನಸಂಖ್ಯೆಯನ್ನು ಹೊಂದಿದ್ದರೂ, ಗ್ರಾಮಸ್ಥರು ತಮ್ಮ ಧಾರ್ಮಿಕ ಸಂಘಗಳ ಬಗ್ಗೆ ಪರಸ್ಪರ ತಿಳುವಳಿಕೆಯೊಂದಿಗೆ ಶಾಂತಿಯುತವಾಗಿ ಬದುಕುತ್ತಿದ್ದಾರೆ. ಅಲಿಪುರದಲ್ಲಿ ಪೊಲೀಸ್ ಠಾಣೆ ಇಲ್ಲದಿರುವುದು ಮತ್ತೊಂದು ವಿಶೇಷ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.