2026-04-23 10:53:28

Khadima, who had been peddling drugs for 2 years, arrested|12ವರ್ಷದಿಂದ ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ಖದೀಮ ಅರೆಸ್ಟ್|Speed News Kannada

Khadima, who had been peddling drugs for 2 years, arrested|12ವರ್ಷದಿಂದ  ಡ್ರಗ್ ಪೆಡ್ಲಿಂಗ್ ಮಾಡ್ತಿದ್ದ ಖದೀಮ ಅರೆಸ್ಟ್|Speed News Kannada

ಡ್ರಗ್ಸ್ ಮುಕ್ತ ಬೆಂಗಳೂರು ನಿರ್ಮಾಣಕ್ಕೆ ಪಣ ತೊಟ್ಟಿರುವ ಸಿಟಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸರು ಚಾಪೆ ಕೆಳಗೆ ತೂರಿದರೆ, ಪೆಡ್ಲರ್‌ಗಳು ರಂಗೋಲಿ ಕೆಳಗೆ ತೂರುತ್ತಿದ್ದ ದಂಧೆಗೆ ಬೆಂಗಳೂರು ಪೊಲೀಸರು ಬ್ರೇಕ್ ಹಾಕಿದ್ದಾರೆ. ವಿವಿಧೆಡೆ ದಾಳಿ ನಡೆಸಿರುವ ಖಾಕಿ ಪಡೆ, ಬರೋಬ್ಬರಿ 14 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ಸೀಜ್ ಮಾಡಿದೆ.

ಈ ಇಡೀ ಕಾರ್ಯಾಚರಣೆಯ ಹೈಲೈಟ್ ಅಂದ್ರೆ ಹೆಬ್ಬಗೋಡಿ ಪೊಲೀಸರು ಬಂಧಿಸಿರುವ ಇಮ್ಯಾನ್ಯುಯಲ್ ಎಂಬ ನೈಜೀರಿಯಾ ಪ್ರಜೆ. 2014ರಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಈತ, ಇಲ್ಲಿನ ಮಹಿಳೆಯನ್ನೇ ಮದುವೆಯಾಗಿ ಕಳೆದ 12 ವರ್ಷಗಳಿಂದ ದಂಧೆ ನಡೆಸುತ್ತಿದ್ದ. ನಾಲ್ಕೈದು ಮನೆಗಳನ್ನು ಬಾಡಿಗೆಗೆ ಪಡೆದು ಎಂಡಿಎಂಎ, ಎಲ್‌ಎಸ್‌ಡಿ ಸೇರಿದಂತೆ ಸಿಂಥೆಟಿಕ್ ಡ್ರಗ್ಸ್ ಪೂರೈಸುತ್ತಿದ್ದ ಈತನಿಂದ ಬರೋಬ್ಬರಿ 14 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತ ಯಲಹಂಕ ಉಪನಗರ ಪೊಲೀಸರು ಕೇರಳ ಮೂಲದ ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಆದೇಶ್ ಮತ್ತು ಮೊಹಮ್ಮದ್ ನಿಶಾದ್ ಎಂಬ ಈ ಕಿರಾತಕರು ಒಡಿಶಾದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು. ಇವರಿಂದ 10 ಲಕ್ಷ 50 ಸಾವಿರ ಮೌಲ್ಯದ 21 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.

ಮತ್ತೊಂದೆಡೆ ಪರಪ್ಪನ ಅಗ್ರಹಾರ ಪೊಲೀಸರು ವಿಭಿನ್ನ ಕಾರ್ಯಾಚರಣೆ ನಡೆಸಿದ್ದಾರೆ. ಡೆಲಿವರಿ ಬಾಯ್ ಆಗಿದ್ದ ರಾಹುಲ್ ಮತ್ತು ಆಟೋ ಡ್ರೈವರ್ ಆಗಿದ್ದ ಪ್ರೇಮ್ ಎಂಬುವವರು ತಮಿಳುನಾಡಿನಿಂದ ಗಾಂಜಾ ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಇವರಿಂದ 3 ಲಕ್ಷ ಮೌಲ್ಯದ ಏಳುವರೆ ಕೆಜಿ ಗಾಂಜಾವನ್ನು ಸೀಜ್ ಮಾಡಲಾಗಿದೆ.ಒಟ್ಟಾರೆ ಬೆಂಗಳೂರಿನ ಮೂಲೆ ಮೂಲೆಗಳಲ್ಲಿ ಹರಡಿಕೊಂಡಿದ್ದ ಡ್ರಗ್ ಜಾಲಕ್ಕೆ ಪೊಲೀಸರು ಬರೆ ಎಳೆದಿದ್ದಾರೆ. ಸದ್ಯ ಬಂಧಿತರನ್ನು ಜೈಲಿಗಟ್ಟಲಾಗಿದ್ದು, ಈ ಜಾಲದ ಹಿಂದಿರುವ ಇತರ ಕಿಂಗ್‌ಪಿನ್‌ಗಳಿಗಾಗಿ ಹುಡುಕಾಟ ಮುಂದುವರಿದಿದೆ.

 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.