2026-03-07 01:49:39

Karnataka High Court slams actor Ranveer Singh | ಧಾರ್ಮಿಕ ಭಾವನೆಗಳನ್ನು ಅಣಕಿಸಬಾರದು ನಟ ರಣವೀರ್ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್ ತರಾಟೆ | Speed News Kannada

Karnataka High Court slams actor Ranveer Singh | ಧಾರ್ಮಿಕ ಭಾವನೆಗಳನ್ನು ಅಣಕಿಸಬಾರದು ನಟ ರಣವೀರ್ ಸಿಂಗ್‌ಗೆ ಕರ್ನಾಟಕ ಹೈಕೋರ್ಟ್ ತರಾಟೆ | Speed News Kannada

ಬೆಂಗಳೂರು: "ಕಾಂತಾರ ಚಾಪ್ಟರ್‌-1’ ಚಿತ್ರದ ದೈವಪಾತ್ರಗಳನ್ನು ಅಣಕಿಸಿದ ಆರೋಪ ಎದುರಿಸುತ್ತಿರುವ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ತನಿಖೆಗೆ ಸಹಕರಿಸಬೇಕು ಮತ್ತು ತನಿಖೆಗೆ ಸಹಕರಿಸಿದರೆ ಅವರ ವಿರುದ್ಧ ಯಾವುದೇ ಆತುರದ ಕ್ರಮ‌ ಕೈಗೊಳ್ಳಬಾರದು" ಎಂದು ಕರ್ನಾಟಕ ಹೈಕೋರ್ಟ್‌ ಪ್ರಾಸಿಕ್ಯೂಷನ್ ಗೆ ಆದೇಶ ನೀಡಿದೆ.
"ನನ್ನ ವಿರುದ್ಧ ನಗರದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದಾಖಲಾಗಿರುವ ಖಾಸಗಿ ದೂರು ಮತ್ತು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು" ಎಂದು ಕೋರಿ 41 ವರ್ಷದ ರಣವೀರ್‌ ಸಿಂಗ್‌ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಇಂದು ವಿಚಾರಣೆ ನಡೆಸಿತು.
"ರಣವೀರ್ ಸಿಂಗ್ ದೊಡ್ಡ ನಟನೇ ಆಗಿರಬಹುದು.  ಹಾಗೆಂದು ಅವರು ಮತ್ತೊಬ್ಬರ ಧಾರ್ಮಿಕ ಭಾವನೆಗಳನ್ನು ಕುಚೇಷ್ಟೆ ಮಾಡುವ ಮೂಲಕ ಅಣಕಿಸುವುದು ಸರಿಯಲ್ಲ" ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ರಣವೀರ್ ಾವರ ವರ್ತನೆಯನ್ನು ತರಾಟೆಗೆ ತೆಗೆದುಕೊಂಡರು.
ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್ ಗೆ ನಿರ್ದೇಶಿಸಿ ನ್ಯಾಯಪೀಠ ವಿಚಾರಣೆ ಮುಂದೂಡಿತು.
ರಣವೀರ್ ಪರ ಪದಾಂಕಿತ ಹಿರಿಯ ವಕೀಲ ಸಜನ್ ಪೂವಯ್ಯ ಮತ್ತು ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ವಾದ ಮಂಡಿಸಿದರು.
ಏನಿದು ಪ್ರಕರಣ?: ಗೋವಾದಲ್ಲಿ 2025ರ ನವೆಂಬರ್ 28ರಂದು ‘ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ’ದ ಸಮಾರೋಪ ಸಮಾರಂಭದಲ್ಲಿ ರಣವೀರ್‌ ಸಿಂಗ್‌, ‘ಕಾಂತಾರ ಚಾಪ್ಟರ್‌-1’ ಕುರಿತು ಮಾತನಾಡಿದ್ದರು.
ಅವರು, ಮಾತನಾಡುತ್ತಾ ‘ಕರಾವಳಿ ಕರ್ನಾಟಕದ ಪಂಜುರ್ಲಿ, ಗುಳಿಗ ದೈವಗಳ ದೈವೀಕ ಅಭಿವ್ಯಕ್ತಿಯನ್ನು ಅವಹೇಳನಕಾರಿ ರೀತಿಯಲ್ಲಿ ಅನುಕರಣೆ ಮಾಡಿ ಅಣಕಿಸಿದ್ದಾರೆ. ಚಾಮುಂಡಿ ದೈವವನ್ನು ಹೆಣ್ಣು ದೆವ್ವ ಎಂದು ಕರೆದು ಅಪಮಾನ ಮಾಡಿದ್ದಾರೆ. ಈ ಮೂಲಕ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ  ಎಂದು ನಗರದ ವಕೀಲ ಪ್ರಶಾಂತ್‌ ಮೆಥಲ್‌ 1ನೇ ಹೆಚ್ಚುವರಿ ಚೀಫ್‌ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ (ಸಿಜೆಎಂ) ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ್ದ ಸಿಜೆಎಂ ನ್ಯಾಯಾಲಯ ತನಿಖೆ ನಡೆಸುವಂತೆ 2026ರ ಜನವರಿ 23ರಂದು ಪೊಲೀಸರಿಗೆ ನಿರ್ದೇಶಿಸಿತ್ತು. ಇದರನ್ವಯ ಹೈಗ್ರೌಂಡ್ಸ್‌ ಠಾಣಾ ಪೊಲೀಸರು, ಭಾರತೀಯ ನ್ಯಾಯ ಸಂಹಿತಾ–2023ರ (ಬಿಎನ್‌ಎಸ್‌) ಕಲಂ 196, 299 ಮತ್ತು 302ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.