2026-06-08 01:20:28

ರಾಜ್ಯಕ್ಕೆ 1,122 MBBS, PG ಸೀಟುಗಳು ಲಭ್ಯ: ಡಾ.ಶರಣ್‌ ಪ್ರಕಾಶ್‌ ಪಾಟೀಲ್‌|Speed News Kannada

 ರಾಜ್ಯಕ್ಕೆ 1,122 MBBS, PG ಸೀಟುಗಳು ಲಭ್ಯ: ಡಾ.ಶರಣ್‌ ಪ್ರಕಾಶ್‌ ಪಾಟೀಲ್‌|Speed News Kannada

ಬೆಂಗಳೂರು: ರಾಜ್ಯದ ವೈದ್ಯಕೀಯ ಪದವಿ (MBBS) ಹಾಗೂ ಸ್ನಾತಕೋತ್ತರ ಪದವಿ (PG) ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯಕ್ಕೆ ಹೆಚ್ಚುವರಿಯಾಗಿ ಒಟ್ಟು 1,122 ಯುಜಿ ಮತ್ತು ಪಿಜಿ ಸೀಟುಗಳು ಲಭ್ಯವಾಗಲಿವೆ. ಇದರಿಂದ ವೈದ್ಯಾರಗಬೇಕು ಎಂದು ಬಯಸಿದ್ದವರ ಕನಸು ನನಸಾಗಲಿದೆ.

ಇದೀಗ ಕೇಂದ್ರ ಸರ್ಕಾರದ "ಭಾರತದಲ್ಲಿನ ಅಸ್ತಿತ್ವದಲ್ಲಿರುವ ವೈದ್ಯಕೀಯ ಕಾಲೇಜುಗಳ ಬಲವರ್ಧನೆ ಮತ್ತು ಮೇಲ್ದರ್ಜೆಗೇರಿಸುವಿಕೆ” ಯೋಜನೆಯಡಿ ಸೀಟುಗಳ ಹೆಚ್ಚಳಕ್ಕೆ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಇದರನ್ವಯ 11 ವೈದ್ಯಕೀಯ ಸಂಸ್ಥೆಗಳಲ್ಲಿ 550 ಎಂಬಿಬಿಎಸ್ (UG) ಸೀಟುಗಳು ಹಾಗೂ 23 ಸಂಸ್ಥೆಗಳಲ್ಲಿ 572 ಪಿಜಿ ಸೀಟುಗಳನ್ನು ಹೆಚ್ಚಿಸಲು ಅನುಮೋದನೆ ದೊರೆತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತಿ ಸೀಟು ಹೆಚ್ಚಳಕ್ಕೆ ತಗಲುವ 1.5 ಕೋಟಿ ರೂ. ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40ರ ಅನುಪಾತದಲ್ಲಿ ಭರಿಸಲಿವೆ. ಯುಜಿ ಸೀಟುಗಳ ಹೆಚ್ಚಳಕ್ಕಾಗಿ ಒಟ್ಟು ರೂ.825 ಕೋಟಿ ವೆಚ್ಚವಾಗಲಿದ್ದು, ಇದರಲ್ಲಿ ಕೇಂದ್ರದ ಪಾಲು 495 ಕೋಟಿ ರೂ. ಹಾಗೂ ರಾಜ್ಯದ ಪಾಲು 330 ಕೋಟಿ ರೂ. ಆಗಿದೆ. ಅದೇ ಬಿಟಿ ಪಿಜಿ ಸೀಟುಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ 20 ವೈದ್ಯಕೀಯ ಕಾಲೇಜುಗಳ 528 ಸೀಟುಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಧನಸಹಾಯ ನೀಡಲಿವೆ. ಇನ್ನುಳಿದ 4 ಸ್ವತಂತ್ರ ಸ್ನಾತಕೋತ್ತರ ಸಂಸ್ಥೆಗಳ 44 ಪಿಜಿ ಸೀಟುಗಳಿಗೆ ಕೇಂದ್ರ ಸರ್ಕಾರವೇ ಶೇ. 100 ರಷ್ಟು ಸಂಪೂರ್ಣ ಧನಸಹಾಯ ನೀಡಲಿದೆ. ಈ ಪ್ರಕ್ರಿಯೆಯನ್ನು ಮುಂದುವರಿಸಲು ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ತಿಳಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು, ರಾಜ್ಯದಲ್ಲಿ ಪ್ರಸ್ತುತ ಸರ್ಕಾರಿ, ಖಾಸಗಿ, ಡೀಮ್ಸ್ ವಿಶ್ವವಿದ್ಯಾಲಯಗಳು ಸೇರಿದಂತೆ ಒಟ್ಟು 72 ವೈದ್ಯಕೀಯ ಕಾಲೇಜುಗಳಿದ್ದು, 13,945 ಯುಜಿ ಹಾಗೂ 7,727 ಪಿಜಿ ಸೀಟುಗಳು ಲಭ್ಯವಿದೆ ಎಂದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.