ಕನ್ನಡದ ಪ್ರತಿಭೆಗಳು ಇದೀಗ ತೆಲುಗು ಓಟಿಟಿ ಜಗತ್ತಿನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ನಿರ್ದೇಶಕ ರಮೇಶ್ ಇಂದ್ರಾ ಹಾಗೂ ನಿರ್ಮಾಪಕಿ ಶ್ರುತಿ ನಾಯ್ಡು ಅವರ ಹೊಸ ತೆಲುಗು ವೆಬ್ ಸೀರೀಸ್ “ಪೋಚಮ್ಮ” ಬಿಡುಗಡೆಗೆ ಸಿದ್ಧವಾಗಿದೆ. ಐದು ಸಂಚಿಕೆಗಳ ಈ ವೆಬ್ ಸರಣಿಯಲ್ಲಿ ಕನ್ನಡದ ಯುವ ನಟ ವಿವೇಕ್ ಸಿಂಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣಗೊಂಡಿರುವ ಈ ಸರಣಿ, ಭಕ್ತಿ, ಎಮೋಷನ್ ಅಂಶಗಳನ್ನು ಒಳಗೊಂಡಿದೆ ಎಂದು ನಟ ವಿವೇಕ್ ಸಿಂಹ ತಿಳಿಸಿದ್ದಾರೆ.
ಈ ಸರಣಿಯಲ್ಲಿ ಹಿರಿಯ ನಟ ಅಚ್ಯುತ್ ಕುಮಾರ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಕೃತಿ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷವಾಗಿ ಅಚ್ಯುತ್ ಕುಮಾರ್ ಮತ್ತು ವಿವೇಕ್ ಸಿಂಹ ನಡುವಿನ ಕಾಂಬಿನೇಷನ್ ಗಮನ ಸೆಳೆಯಲಿದೆ. “ಪೋಚಮ್ಮ” ಎಂಬ ಶೀರ್ಷಿಕೆ ಕಾಲ್ಪನಿಕವಲ್ಲ, ಕಡಪ ಮತ್ತು ಕೋಲಾರ ಭಾಗಗಳಲ್ಲಿ ಆರಾಧಿಸಲ್ಪಡುವ ದೇವಿಯ ಹೆಸರಾಗಿದೆ. ಈ ಸರಣಿಯ ಮೂಲಕ ನಿರ್ದೇಶಕ ರಮೇಶ್ ಇಂದ್ರಾ, ನಿರ್ಮಾಪಕಿ ಶ್ರುತಿ ನಾಯ್ಡು ಮತ್ತು ನಟ ವಿವೇಕ್ ಸಿಂಹ ತೆಲುಗು ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ. ಈ ವೆಬ್ ಸೀರೀಸ್ ಏಪ್ರಿಲ್ 17ರಿಂದ ‘ಆಹಾ’ ಓಟಿಟಿ ವೇದಿಕೆಯಲ್ಲಿ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ.