ಗದಗ: ತಮ್ಮ ಸುಖ ತ್ಯಾಗ ಮಾಡಿದ ತಾಯಿ-ತಂದೆಯರನ್ನು ವೃದ್ಧಾಶ್ರಮದಲ್ಲಿ ಕಾಣುವಂತಾಗಿರುವುದು ಬೇಸರದ ಸಂಗತಿ. ಆದರೆ ಬಸವರಾಜ ಹೊರಟ್ಟಿ ಅವರು ತಾಯಿ ಹೆಸರಲ್ಲಿ ಮಾಡುತ್ತಿರುವ ಕಾರ್ಯ ಮಾದರಿಯಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಶ್ಲಾಘಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಿದ್ದ "ಅವ್ವ ಸೇವಾ ಟ್ರಸ್ಟ್ ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ದತ್ತಿ ನಿಧಿ ಕಾರ್ಯಕ್ರಮದಲ್ಲಿ "ತನುಜಾ ನಾಯಕ" ಅವರಿಗೆ ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಗುರುವ್ವ ಹೊರಟ್ಟಿ ಈ ಕಾರ್ಯಕ್ರಮದ ನೈತಿಕ ಶಕ್ತಿ ಆಗಿದ್ದಾರೆ. ಈ ತಾಯಿಯ ಕಾಳಜಿ, ಸಂಸ್ಕಾರ ಮತ್ತು ಕನವರಿಕೆಗಳನ್ನು ಅಕ್ಷರಕ್ಕೆ ಇಳಿಸುತ್ತಾ ಇವರ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವ ಸುನಂದಾ ನಾಯಕ ಅವರ ಆಯ್ಕೆ ಅತ್ಯಂತ ಸೂಕ್ತವಾಗಿದೆ ಎಂದರು.
ಇಂಥಾ ಆದರ್ಶಪ್ರಾಯ ಅವ್ವನವರ ಹೆಸರಿನ ಪ್ರಶಸ್ತಿಗೆ ತನುಜಾ ನಾಯಕ ಅವರನ್ನು ಆಯ್ಕೆ ಮಾಡಿರುವುದು ಹೆಚ್ಚು ಸೂಕ್ತವಾಗಿದೆ. ಮಹಿಳಾ ಸಂವೇದನೆ, ಕೌಟುಂಬಿಕ ಮೌಲ್ಯಗಳು, ಸಾಮಾಜಿಕ ಜಾಗೃತಿ ಮತ್ತು ಜೀವನ ಪ್ರೀತಿಯನ್ನು ಸಾರುವಂತಹ ಲೇಖನಗಳನ್ನು ನಿರಂತರವಾಗಿ ಬರೆಯುತ್ತಿರುವ ತನುಜಾ ನಾಯಕ ಅವರ "ಸಾಮಾಜಿಕ ನೋಟ" ಇವತ್ತಿನ ಕಿರಿಯ ವೃತ್ತಿವಾಂದವರಿಗೆ ಮಾದರಿಯಾಗಿದ್ದಾರೆ ಎಂದರು.
ಗ್ರಾಮೀಣ ಪತ್ರಿಕೋದ್ಯಮ ಅಂದ ಕೂಡಲೇ ನನಗೆ ತಕ್ಷಣ ನೆನಪಾಗುವುದು ಪಿ.ಸಾಯಿನಾಥ್ ಅವರು. ಇವರು ಬರೆದಿರುವ "Every body loves good drought" ಎನ್ನುವ ಪುಸ್ತಕ "ಗ್ರಾಮೀಣ ಪತ್ರಿಕೋದ್ಯದ ಬೈಬಲ್" ಎಂದು ಕರೆಯಬಹುದು. ಈ ಪುಸ್ತಕ "ಬರ ಅಂದರೆ ಎಲ್ಲರಿಗೂ ಇಷ್ಟ" ಎಂದು ಕನ್ನಡದಲ್ಲೂ ಬಂದಿದೆ. ನಗರ ಕೇಂದ್ರಿತ ಪತ್ರಿಕೋದ್ಯಮ "ಅಭಿವೃದ್ಧಿ" ಎಂದರೆ ಕೇವಲ ಜಿಡಿಪಿ ಬೆಳವಣಿಗೆ ಅಥವಾ ಷೇರು ಮಾರುಕಟ್ಟೆಯ ಏರಿಳಿತವನ್ನು ಮಾತ್ರ ಅಭಿವೃದ್ಧಿ ಎಂದು ಬಿಂಬಿಸುತ್ತವೆ.
ಆದರೆ ನಿಜವಾದ ಅಭಿವೃದ್ಧಿ ಎಂದರೆ ಗ್ರಾಮೀಣ ಭಾಗದ ಜನರ ಜೀವನಮಟ್ಟ ಸುಧಾರಿಸುವುದು ಮತ್ತು ಗ್ರಾಮೀಣ ಆರ್ಥಿಕತೆ ಬೆಳವಣಿಗೆಯೇ ನಿಜವಾದ ಅಭಿವೃದ್ಧಿ ಎನ್ನುವುದನ್ನು ನಾವು ಮರೆಯಬಾರದು ಎಂದರು.
ಕೇಂದ್ರ ಸರ್ಕಾರ ನೋಟು ನಿಷೇಧ ಜಾರಿಗೆ ತಂದಾಗ ನಗರ ಕೇಂದ್ರಿತ ಆರ್ಥಿಕತೆ, ದುಡಿಮೆ ಎಲ್ಲಾ ನೆಲಕಚ್ಚಿತು. ಆದರೆ, ಇಡೀ ದೇಶದ ಆರ್ಥಿಕತೆ ಪೂರ್ತಿ ನೆಲ ಕಚ್ಚದಂತೆ ಕಾಪಾಡಿದ್ದು ನಮ್ಮ ಗ್ರಾಮೀಣ ಆರ್ಥಿಕತೆ. ಸಾಸಿವೆ ಡಬ್ಬಿ, ಎಲೆ ಅಡಿಕೆ ಚೀಲದಲ್ಲಿ ಗ್ರಾಮೀಣ ಮಹಿಳೆಯರು ಕಾಪಿಡುವ, ಉಳಿತಾಯ ಮಾಡುವ ಹಣ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕುಟುಂಬಗಳ ಬದುಕಿಗೆ ಆಸರೆ ಆಗಿದ್ದನ್ನು ನಾವು ನೆನಪಿಸಿಕೊಳ್ಳಬೇಕು ಎಂದರು.
ಸಭಾಪತಿ ಬಸವರಾಜ ಹೊರಟ್ಟಿ, ದತ್ತಿ ನಿಧಿ ಪ್ರಶಸ್ತಿ ಪುರಸ್ಕೃತ ತನುಜಾ ನಾಯಕ ಸೇರಿ ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮತ್ತು ವಿವಿಯ ಕುಲಸಚಿವರಾದ ಸುರೇಶ್ ನಾಡಗೌಡ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.