ಬೆಂಗಳೂರು: ಮಾಧ್ಯಮದ ಕಾರ್ಯನಿರ್ವಹಣೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಈ ಹಿಂದಿನಂತೆ ಸುಗಮವಾಗಿ ವರದಿಗಾರಿಕೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಪತ್ರಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ನಿಗಧಿತ ಸ್ಥಳದಲ್ಲಿ ಮಾತ್ರ ಪ್ರತಿಕ್ರಿಯೆ ಪಡೆಯಬೇಕು ಮತು ಎಲ್ಲೆಂದರಲ್ಲಿ ಬೈಟ್ ಪಡೆಯುವಂತಿಲ್ಲ ಎಂದು ಸರ್ಕಾರ ಆದೇಶಿಸಿತ್ತು.
ಸರ್ಕಾರದ ನಿರ್ಧಾರವನ್ನು ಖಂಡಿಸಿ ಮಾಧ್ಯಮ ಪ್ರತಿನಿಧಿಗಳು ವಿಧಾನಸೌಧದ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ನಂತರ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆವಿ ಪ್ರಭಾಕರ್ ಅವರಿಗೆ ಮನವಿ ಪತ್ರವನ್ನು ನೀಡಿದರು.
ಮುಖ್ಯಮಂತ್ರಿಗಳಾಗಿ ರಾಜ್ಯದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಸದಾ ಎತ್ತಿ ಹಿಡಿಯುತ್ತಾ ಬಂದಿದ್ದೀರಿ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮದ ಸ್ವಾತಂತ್ರ್ಯ ಮತ್ತು ಕಾರ್ಯನಿರ್ವಹಣೆಗೆ ತಾವು ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿರುವುದು ಎಲ್ಲರಿಗೂ ತಿಳಿದಿರುತ್ತದೆ.
ಆದರೆ, ಇತ್ತೀಚೆಗೆ ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರವೇಶ ಮತ್ತು ವರದಿಗಾರಿಕೆಗೆ ನಿರ್ಬಂಧ ವಿಧಿಸಲು ಸರ್ಕಾರ ನಿರ್ಧರಿಸಿರುವುದು ನಮಗೆ ಅತೀವ ಆತಂಕ ಮತ್ತು ವಿಷಾದವನ್ನು ತಂದಿದೆ. ಈ ನಿರ್ಧಾರದಿಂದಾಗಿ ಶಾಸಕಾಂಗದ ಕಾರ್ಯವೈಖರಿ ಮತ್ತು ಸರ್ಕಾರದ ನಿರ್ಧಾರಗಳನ್ನು ಸಾರ್ವಜನಿಕರಿಗೆ ನಿಖರವಾಗಿ ತಲುಪಿಸುವಲ್ಲಿ ಮಾಧ್ಯಮಗಳಿಗೆ ಅಡ್ಡಿಯಾಗಬಹುದು.
ಸರ್ಕಾರದ ಕೇಂದ್ರ ಸ್ಥಾನವಾದ ವಿಧಾನಸೌಧದಲ್ಲಿ ಮಾಧ್ಯಮದ ಚಟುವಟಿಕೆಗಳು ಸರ್ಕಾರದ ಪಾರದರ್ಶಕತೆಯನ್ನು ಪ್ರತಿಬಿಂಬಿಸುತ್ತವೆ. ನಿರ್ಬಂಧವು ಜನರಲ್ಲಿ ತಪ್ಪು ಸಂದೇಶ ರವಾನಿಸಬಹುದು ಎಂದು ತಿಳಿಸಲಾಗಿದೆ.
ವರದಿಗಾರರು ಜನಪ್ರತಿನಿಧಿಗಳನ್ನು ಭೇಟಿಯಾಗಿ ಅವರ ಅಭಿಪ್ರಾಯಗಳನ್ನು ಪಡೆಯಲು ಕಷ್ಟವಾಗಬಹುದು, ಇದರಿಂದ ಸಾರ್ವಜನಿಕ ಚರ್ಚೆಗಳು ಅಪೂರ್ಣಗೊಳ್ಳುವ ಸಾಧ್ಯತೆ ಇರುತ್ತದೆ. ತಾವು ಪತ್ರಿಕಾ ರಂಗದ ಮಹತ್ವವನ್ನು ಬಲ್ಲವರಾಗಿದ್ದೀರಿ. ಮಾಧ್ಯಮದ ಕಾರ್ಯನಿರ್ವಹಣೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಮತ್ತು ಈ ಹಿಂದಿನಂತೆ ಸುಗಮವಾಗಿ ವರದಿಗಾರಿಕೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿಯಲ್ಲಿ ಕೋರಲಾಗಿದೆ. ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.