ಶಿವಮೊಗ್ಗ : ಮಹಿಳೆಗೆ ಉದ್ಯೋಗದ ಭರವಸೆ ನೀಡಿ ಹಣ ಪಡೆದು ಮೋಸ ಮಾಡಿದ ಆರೋಪ ಗಂಭೀರ ತಿರುವು ಪಡೆದಿದೆ. 3 ಲಕ್ಷ ರೂ. ಹಣ ಪಡೆದು ವಂಚಿಸಿರುವ ಹಿನ್ನೆಲೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನಾಜಿಮಾ ಹಾಗೂ ವೈ. ತಿಮ್ಮರಾಜು ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಅಸ್ಮಾ ಬಾನು ಎಂಬ ಮಹಿಳೆಗೆ ಗುತ್ತಿಗೆ ಆಧಾರದಲ್ಲಿ ಕೆಲಸ ಕಲ್ಪಿಸುವುದಾಗಿ ಹೇಳಿ ಈ ಹಣ ಪಡೆದಿದ್ದಾರೆ ಎನ್ನಲಾಗಿದೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಪರಿಷತ್ ಸದಸ್ಯರ ಹೆಸರನ್ನು ಬಳಸಿಕೊಂಡು ನಂಬಿಸಿ ವಂಚಿಸಿರುವುದಾಗಿ ಆರೋಪಿಸಲಾಗಿದೆ. ಈ ಕುರಿತು ಅಸ್ಮಾ ಬಾನು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿ ಪಕ್ಷಕ್ಕೆ ಮುಜುಗರ ಉಂಟಾಯಿತು. ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅಂತಿಮವಾಗಿ ಜಿಲ್ಲಾಧ್ಯಕ್ಷ ಆರ್. ಪ್ರಸನ್ನ ಕುಮಾರ್ ಆದೇಶದಂತೆ ಇಬ್ಬರನ್ನು 6 ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಲಾಗಿದೆ.