2026-07-06 02:46:32

ಜಿಬಿಎ ಚುನಾವಣೆಗೆ‌ ಜೆಡಿಎಸ್ ತಯಾರಿ;ಸಲಹೆ, ಸೂಚನೆ ನೀಡಿದ ಸಚಿವ ಕುಮಾರಸ್ವಾಮಿ| Speed News Kannada

ಜಿಬಿಎ ಚುನಾವಣೆಗೆ‌ ಜೆಡಿಎಸ್ ತಯಾರಿ;ಸಲಹೆ, ಸೂಚನೆ ನೀಡಿದ ಸಚಿವ ಕುಮಾರಸ್ವಾಮಿ| Speed News Kannada

ಬೆಂಗಳೂರು: ಗ್ರೇಟರ್‌ ಬೆಂಗಳುರು ಪ್ರಾಧಿಕಾರ ಅಡಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುವ ಸಾಧ್ಯತೆಗಳಿದ್ದು, ಜೆಡಿಎಸ್‌ ಮಹತ್ವದ ಸಭೆ ನಡೆಸಿದೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಯಾರಿ, ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆದಿದೆ.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಮತಗಟ್ಟೆ ಹಾಗೂ ವಾರ್ಡುವಾರು ಮಟ್ಟದಲ್ಲಿ ಪಕ್ಷ ಸಂಘಟನೆ ಬಗ್ಗೆ ಮುಖಂಡರಿಗೆ ಸೂಚನೆಗಳನ್ನು ಕೊಟ್ಟ ಸಚಿವರು, ಚುನಾವಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ರಾಜ್ಯ ಸರಕಾರಕ್ಕೆ ಗಡುವು ನೀಡಿದೆ. ಹೇಗಾದರೂ ಮಾಡಿ ಚುನಾವಣೆಯನ್ನು ಮುಂದಕ್ಕೆ ಹಾಕಿಕೊಂಡು ಹೋಗಬೇಕು ಎಂದುಕೊಂಡಿದ್ದ ಸರಕಾರಕ್ಕೆ ನ್ಯಾಯಾಲಯ ಚಾಟಿ ಬೀಸಿದೆ. ಬೆಂಗಳೂರು ಜನರ ಹಕ್ಕನ್ನು ಕಸಿಯುವ ದುಸ್ಸಾಹಸ ಮಾಡಿತು ಎಂದರು.

ಚುನಾವಣೆಗೆ ಶ್ರಮಪಟ್ಟು ಕೆಲಸ ಮಾಡಿ. ಸಂಘಟನೆಯನ್ನು ಇನ್ನಷ್ಟು ಗಟ್ಟಿ ಗಳಿಸಿ. ಎಷ್ಟು ಸೀಟು ಪಡೆಯುತ್ತೇವೆ ತಲೆ ಕೆಡಿಸಿಕೊಳ್ಳಬೇಡಿ. ಆ ವಿಚಾರವನ್ನು ನನಗೆ ಬಿಡಿ. 369 ಎಲ್ಲಾ ವಾರ್ಡುಗಳಲ್ಲಿ ಬಿರುಸಿನಿಂದ ಕೆಲಸ ಮಾಡಿ. ಸರ್ಕಾರದ ವೈಫಲ್ಯಗಳನ್ನು ಜನತೆಗೆ ಮಾನವರಕೆ ಮಾಡಿಕೊಡಿ. ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಸರಕಾರ ನಗರದ ಜನರನ್ನು ಮಾಡಿರುವ ಸುಲಿಗೆ ಮನೆ ಮನೆಗೂ ಮಾಹಿತಿ ನೀಡಿ. ಯೋಜನೆಗಳ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆಯುತ್ತಿರುವ ಬಗ್ಗೆ ಜನರಲ್ಲಿ ಜಾಗೃತಿ ಮಾಡಿಸಿ ಎಂದು ಮುಖಂಡರು ಮತ್ತು ರಾಜ್ಯಮಟ್ಟದ ನಾಯಕರಿಗೆ ಸೂಚಿಸಿದರು.

ಈಗಿನಿಂದ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಗ್ರೇಟರ್ ಬೆಂಗಳೂರು ಜಿಲ್ಲಾ ಸಮಿತಿಗೆ ಸೂಚಿಸಿದ ಸಚಿವರು, ಈ ನಿಟ್ಟಿನಲ್ಲಿ ನಗರ ಸಮಿತಿ ಮತ್ತು ನಗರದ ಜನಪ್ರತಿನಿಧಿಗಳು ಪರಸ್ಪರ ಸಂಯೋಜನೆ, ಒಮ್ಮತದಿಂದ ಕೆಲಸ ಮಾಡಬೇಕು ಎಂದು ಕುಮಾರಸ್ವಾಮಿ ಅವರು ನಿರ್ದೇಶನ ನೀಡಿದರು.

ಸಭೆಯಲ್ಲಿ ಗ್ರೇಟರ್ ಬೆಂಗಳೂರು ಸಮಿತಿ ಅಧ್ಯಕ್ಷ ಹೆಚ್. ಎಂ. ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಟಿ.ಎನ್. ಜವರಾಯಿಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಸೇರಿ ಬೆಂಗಳೂರಿನ 5 ವಿಭಾಗಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಬಹುತೇಕ ಎಲ್ಲಾ ಹಿರಿಯ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಜೆಡಿಎಸ್ ಪಕ್ಷಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾಹ್ನವಿ ಸೇರ್ಪಡೆ:

ಮಾಜಿ ನಿರೂಪಕಿ, ನಟಿ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ಜಾಹ್ನವಿ ಅವರು ಶನಿವಾರ ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷ ಸೇರಿದರು.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ವಿಶ್ವಾಸವಿಟ್ಟು ಪಕ್ಷವನ್ನು ಸೇರುತ್ತಿರುವದಾಗಿ ಅವರು ಹೇಳಿದರು. ಸಚಿವ ಕುಮಾರಸ್ವಾಮಿ ಹಾಗೂ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೇ ರಶ್ಮಿ ರಾಮೇಗೌಡ ಅವರು ಪಕ್ಷದ ಬಾವುಟ ನೀಡುವ ಮೂಲಕ ಜಾಹ್ನವಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.