ತಿಪಟೂರು: ತುಮಕೂರು ಜಿಲ್ಲೆಯ ತಿಪಟೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ಜೆಡಿಎಸ್ ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಿಂಚಿನ ಸಂಚಾರ ನಡೆಸಿದರು. ಅವರು ಕ್ಷೇತ್ರದ ವ್ಯಾಪ್ತಿಯ ಕಂಚೇಘಟ್ಟ ಜಿ.ಕೆ. ಬಡಾವಣೆಯಲ್ಲಿ ಜರುಗಿದ ಜನರೊಂದಿಗೆ ಜನತಾದಳ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಭಾಗಿಯಾದರು.
ಜನರೊಂದಿಗೆ ಜನತಾದಳ ಕಾರ್ಯಕ್ರಮದ ಮೂಲಕ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಉತ್ತರ ಕನ್ನಡ ಸೇರಿದಂತೆ ಹಳೇ ಮೈಸೂರು ಭಾಗದ ಒಟ್ಟು 62 ವಿಧಾನಸಭಾ ಕ್ಷೇತ್ರಗಳನ್ನು ತಲುಪಿದ್ದು, ಇಂದಿನ ತಿಪಟೂರು ವಿಧಾನಸಭಾ ಕ್ಷೇತ್ರದ ಕಾರ್ಯಕ್ರಮಕ್ಕೆ ಅದ್ದೂರಿ ಸ್ವಾಗತ ಕೋರಿದ ಸರ್ವರಿಗೂ ವಂದನೆಗಳನ್ನು ಸಲ್ಲಿಸಿ, ಜೆಡಿಎಸ್ ಪಕ್ಷದ ಬಲವರ್ಧನೆಗೆ ಶ್ರಮಿಸಲು ಕೋರಿದರು.
ರಾಜಕಾರಣ ಎನ್ನುವುದು ನಿಂತ ನೀರಲ್ಲ! ಬರುವ ದಿನಗಳಲ್ಲಿ ಬದಲಾವಣೆಯ ಪರ್ವ ಆರಂಭವಾಗಲಿದೆ ಎಂದು ತಿಳಿಸಿದ ನಿಖಿಲ್, ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಕೆಟ್ಟ ಆಡಳಿತದ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟರು.
ಇದೇ ವೇಳೆ ತಿಪಟೂರು ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ, ರಾಗಿ ಬೆಳೆಗಾರರಿಗೆ ಆಗುತ್ತಿರುವ ತೊಂದರೆಗಳು, ಈ ರಾಜ್ಯ ಸರ್ಕಾರ ರೈತರಿಗೆ ಯಾವುದೇ ರೀತಿಯಲ್ಲಿ ಅನುಕೂಲ ಮಾಡದೆ, ಬರಿ ಲೂಟಿ ಮಾಡುವುದರಲ್ಲಿ ಹಾಗೂ ಸಾಲ ಮಾಡುವುದರಲ್ಲಿ ಬಹುದೊಡ್ಡ ಸಾಧನೆ ಮಾಡುತ್ತಿದೆ ಎಂದು ಸರ್ಕಾರದ ನಡೆಯನ್ನು ಖಂಡಿಸಿದರು.
ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿಕುಮಾರಸ್ವಾಮಿ ಅವರು ನಾಡಿಗೆ ಹಾಗೂ ರೈತರಿಗೆ ನೀಡಿದ ಕೊಡುಗೆಯನ್ನು ಮನವರಿಕೆ ಮಾಡಿಕೊಟ್ಟು ಮುಂಬರುವ ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಗೆಲುವಿಗೆ ಶ್ರಮಿಸಬೇಕು. ಈ ಮೂಲಕ 2028ಕ್ಕೆ NDA ಸರ್ಕಾರವನ್ನು ರಾಜ್ಯದಲ್ಲಿ ರಚಿಸಲು ನಾವೆಲ್ಲರೂ ಒಗ್ಗಟ್ಟಾಗಿ ದುಡಿಯೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು, ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ತುಮಕೂರು ಜಿಲ್ಲಾಧ್ಯಕ್ಷ ಹೆಚ್. ನಿಂಗಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ ಸುಧಾಕರ್ ಲಾಲ್ , ರವಿ ನಾಗರಾಜಯ್ಯ ಮೊದಲಾದವರು ಉಪಸ್ಥಿತರಿದ್ದರು.