ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಯುದ್ಧ ಸಾರಿದ್ದು ಪರಿಸ್ಥಿತಿ ಗಂಭೀರವಾಗಿದೆ. ಇಸ್ರೇಲ್ ಹಾಗೂ ಅಮೆರಿಕ ಇರಾನ್ ಮೇಲೆ ವೈಮಾನಿಕ ದಾಳಿಗಳನ್ನು ನಡೆಸಿದ್ದರೆ ಇರಾನ್ ಪ್ರತಿದಾಳಿ ನಡೆಸಿದೆ. ಇರಾನ್ ದೇಶವು ಇಸ್ರೇಲ್ ಹಾಗೂ 6 ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ಯುಎಇ, ಸೌದಿ ಅರೇಬಿಯಾ, ಕುವೈತ್, ಜೋರ್ಡಾನ್, ಕತಾರ್ ಮತ್ತು ಬಹ್ರೇನ್ ವಾಯು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಏಕಕಾಲದಲ್ಲಿ ನಾಶಪಡಿಸಿದೆ.
ಇರಾನ್ ನ ಸರ್ವೋಚ್ಚ ನಾಯಕ ಖಮೇನಿ ಮತ್ತು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಗುರಿಯಾಗಿಸಿಕೊಂಡೇ ದಾಳಿಯನ್ನು ನಡೆಸಲಾಗಿತ್ತು ಎಂದು ಇಸ್ರೇಲ್ ಹೇಳಿದೆ. ಖಮೇನಿ ಅವರ ಕಚೇರಿಗಳ ಬಳಿ ಆರಂಭಿಕ ದಾಳಿಗಳು ನಡೆದಿದ್ದವು. ಆದರೆ, ಆ ಸಂದರ್ಭದಲ್ಲಿ ಖಮೇನಿ ಟೆಹ್ರಾನ್‌ನಲ್ಲಿ ಇರಲಿಲ್ಲ. ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿತ್ತು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ದುಬೈ ಸೇರಿ ಗಲ್ಫ್ ದೇಶಗಳ ಭಾರತೀಯರಿಗೆ ಮಾರ್ಗಸೂಚಿ ಬಿಡುಗಡೆ:
ಇರಾನ್, ಸೌದಿ ಅರೇಬಿಯಾ, ಯುಎಇ ಮತ್ತು ಜೋರ್ಡನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಭಾರತೀಯರು ಎಚ್ಚರಿಕೆಯಿಂದ ಇರುವಂತೆ ಭಾರತದ ರಾಯಭಾರ ಕಚೇರಿಗಳು ಮನವಿ ಮಾಡಿವೆ.
ಇಸ್ರೇಲ್‌ನಲ್ಲಿನ ರಾಯಭಾರ ಕಚೇರಿಯು ಈ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಸ್ಥಳೀಯಾಡಳಿತಗಳ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಿದೆ. ಅನಗತ್ಯ ಪ್ರಯಾಣ ಮಾಡದಂತೆ, ಮನೆಯಲ್ಲಿಯೇ ಜಾಗರೂಕತೆಯಿಂದ ಇರಬೇಕು ಎಂದು ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ. ಜೋರ್ಡನ್‌ನಲ್ಲಿರುವ ಭಾರತೀಯ ಪ್ರವಾಸಿಗರು ವಾಣಿಜ್ಯ ವಿಮಾನಗಳ ಸಂಚಾರ ಸ್ಥಗಿತಗೊಳ್ಳುವ ಮುನ್ನ ದೇಶವನ್ನು ತೊರೆಯುವಂತೆ ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ಮಾರ್ಗಸೂಚಿಯಲ್ಲಿ ತಿಳಿಸಿದೆ.