ಅಮೆರಿಕ ಹಾಗೂ ಇರಾನ್ ನಡುವೆ ಎರಡನೇ ಸುತ್ತಿನ ಕದನ ವಿರಾಮ ಘೋಷಣೆಯಯಾಗಿದ್ದರು, ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರೆಸಿದೆ. ಬುಧವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ ಐವರು ಸಾವನ್ನಪ್ಪಿರುವುದಾಗಿ ಲೆಬನಾನ್ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗೆ ಅಮೆರಿಕಾ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ ಮಾಡಲಾಗಿತ್ತು. ಇದರಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಕೂಡ ಭಾಗಿಯಾಗಿತ್ತು. ಆದಾಗ್ಯೂ, ಹಿಂಸಾಚಾರ ಮುಂದುವರಿದಿರುವುದು ಒಪ್ಪಂದದ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. ಯುಎನ್ ಶಾಂತಿಪಡೆಗಳ ಮೇಲೆ ನಡೆದ ದಾಳಿಯಲ್ಲಿ ಗಾಯಗೊಂಡಿದ್ದ ಫ್ರೆಂಚ್ ಸೈನಿಕನೂ ಸಾವನ್ನಪ್ಪಿರುವುದಾಗಿ ಎಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ. ಈ ದಾಳಿಗೆ ಹಿಜ್ಬುಲ್ಲಾ ಕಾರಣ ಎಂದು ಆರೋಪಿಸಲಾಗಿದ್ದರೂ, ಸಂಘಟನೆ ಅದನ್ನು ತಳ್ಳಿಹಾಕಿದೆ. ಲೆಬನಾನ್ ಒಂದು ತಿಂಗಳ ಕಾಲ ಕದನ ವಿರಾಮ ವಿಸ್ತರಣೆ ಕೋರುವ ಸಾಧ್ಯತೆ ಇದೆ. ಜೊತೆಗೆ, ಇಸ್ರೇಲ್ ದಾಳಿಗಳನ್ನು ಸಂಪೂರ್ಣ ನಿಲ್ಲಿಸುವಂತೆ ಒತ್ತಾಯಿಸಲೂ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.