2026-04-23 06:47:57

Iran war | ಅಮೆರಿಕ ಇರಾನ್ ಸಂಘರ್ಷ ಭಾರತದ ಮೇಲೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಭೀತಿ | Speed News Kannada

Iran war | ಅಮೆರಿಕ ಇರಾನ್ ಸಂಘರ್ಷ ಭಾರತದ ಮೇಲೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ಭೀತಿ | Speed News Kannada

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿದೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂದಿಟ್ಟಿದ್ದ ಶಾಂತಿ ಪ್ರಸ್ತಾಪವನ್ನು ಇರಾನ್ ಸ್ಪಷ್ಟವಾಗಿ ತಿರಸ್ಕರಿಸಿದೆ. ಈ ಸಂಘರ್ಷದ ನೇರ ಪರಿಣಾಮ ಈಗ ಭಾರತದ ಮೇಲಾಗುವ ಸಾಧ್ಯತೆಗಳಿದ್ದು, ದೇಶದಲ್ಲಿ ಇಂಧನ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಆತಂಕ ಎದುರಾಗಿದೆ. ಪರ್ಷಿಯನ್ ಗಲ್ಸ್ ಮತ್ತು ಓಮನ್ ಕೊಲ್ಲಿಯ ನಡುವಿನ ಪ್ರಮುಖ ಜಲಮಾರ್ಗವಾದ 'ಹಾರ್ಮುಜ್ ಜಲಸಂಧಿ' ಈಗ ಸಂಘರ್ಷದ ಕೇಂದ್ರಬಿಂದುವಾಗಿದೆ. ವಿಶ್ವದ ಬಹುಪಾಲು ಕಚ್ಚಾ ತೈಲ ಸಾಗಣೆಯು ಇದೇ ಮಾರ್ಗದ ಮೂಲಕ ನಡೆಯುತ್ತದೆ. ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದಂತಹ ವಾತಾವರಣ ನಿರ್ಮಾಣವಾದರೆ ಇರಾನ್ ಈ ಜಲಸಂಧಿಯನ್ನು ಮುಚ್ಚುವ ಬೆದರಿಕೆ ಹಾಕಿದೆ. ಒಂದು ವೇಳೆ ಈ ಮಾರ್ಗ ಬಂದ್ ಆದಲ್ಲಿ, ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆ ಸ್ಥಗಿತಗೊಂಡು ತೈಲ ಬೆಲೆ ಗಗನಕ್ಕೇರಲಿದೆ.
ಭಾರತವು ತನ್ನ ತೈಲ ಅಗತ್ಯದ ಬಹುಭಾಗವನ್ನು ಆಮದಿನ ಮೂಲಕವೇ ಪೂರೈಸಿಕೊಳ್ಳುತ್ತಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಬರುವ ತೈಲ ಹಡಗುಗಳು ಹಾರ್ಮುಜ್ ಜಲಸಂಧಿಯನ್ನೇ ಅವಲಂಬಿಸಿವೆ. ಈ ಬಿಕ್ಕಟ್ಟು ಮುಂದುವರಿದರೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಜನಸಾಮಾನ್ಯರ ಕೈಗೆಟುಕದಂತಾಗಬಹುದು. ಇಂಧನ ಬೆಲೆ ಏರಿಕೆಯು ಸರಕು ಸಾಗಣೆ ವೆಚ್ಚವನ್ನು ಹೆಚ್ಚಿಸಿ, ದಿನಬಳಕೆಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಬಹುದು ಎನ್ನಲಾಗಿದೆ. ಇನ್ನೊಂದೆಡೆ, ಅಮೆರಿಕದ ಒತ್ತಡಕ್ಕೆ ಮಣಿಯದ ಇರಾನ್, ತನ್ನ ಸಾರ್ವಭೌಮತ್ವದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಿದೆ. ಟ್ರಂಪ್ ಅವರ ಸಂಧಾನದ ಆಹ್ವಾನವನ್ನು ತಿರಸ್ಕರಿಸಿರುವ ಇರಾನ್ ನಾಯಕರು, ಅಮೆರಿಕ ಮೊದಲು ತನ್ನ ಮೇಲಿನ ಆರ್ಥಿಕ ದಿಗ್ರಂಧನಗಳನ್ನು ತೆರವುಗೊಳಿಸಲಿ ಎಂದು ಪಟ್ಟು ಹಿಡಿದಿದ್ದಾರೆ. ಈ ಬಿಕ್ಕಟ್ಟನ್ನು ಶಮನಗೊಳಿಸಲು ಅಂತರರಾಷ್ಟ್ರೀಯ ಸಮುದಾಯ ಪ್ರಯತ್ನಿಸುತ್ತಿದ್ದರೂ, ಸದ್ಯದ ಪರಿಸ್ಥಿತಿ  ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ವಿಶ್ವದ ಶಕ್ತಿಶಾಲಿ ದೇಶಗಳ ಈ ಸಂಘರ್ಷವು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರು ಸಾಧ್ಯತೆಯಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.