2026-06-08 01:37:06

Iran & US historic peace talks|ಇರಾನ್ ಅಮೆರಿಕ ಐತಿಹಾಸಿಕ ಶಾಂತಿ ಮಾತುಕತೆ|Speed News Kannada

Iran & US historic peace talks|ಇರಾನ್ ಅಮೆರಿಕ ಐತಿಹಾಸಿಕ ಶಾಂತಿ ಮಾತುಕತೆ|Speed News Kannada

ಅಮೆರಿಕ ಮತ್ತು ಇರಾನ್ ನಡುವಿನ ಐತಿಹಾಸಿಕ ಶಾಂತಿ ಮಾತುಕತೆಗೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ವೇದಿಕೆಯಾಗುತ್ತಿದೆ. ಈ ಮಹತ್ವದ ಸಭೆಗಾಗಿ ಇರಾನ್ ನಿಯೋಗ ಈಗಾಗಲೇ ಪಾಕಿಸ್ತಾನಕ್ಕೆ ಬಂದಿಳಿದಿದ್ದು, ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಇಸ್ಲಾಮಾಬಾದ್‌ಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇರಾನ್ ನಿಯೋಗಕ್ಕೆ ಪಾಕ್ ಸೇನೆಯೇ ನೇರ ಭದ್ರತೆ ಒದಗಿಸುತ್ತಿದ್ದರೂ, ಸಭೆಯಲ್ಲಿ ಭಾಗವಹಿಸುವ ಕುರಿತು ಇರಾನ್ ವಲಯದಲ್ಲಿ ಅಸ್ಪಷ್ಟತೆ ಮತ್ತು ಗೊಂದಲಗಳು ಮುಂದುವರಿದಿವೆ ಎಂದು ವರದಿಗಳು ತಿಳಿಸಿವೆ.

ಮಾತುಕತೆಯ ಕುರಿತು ಅಮೆರಿಕದ ನಾಯಕರು ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು, "ಇರಾನಿಯನ್ನರು ಪ್ರಾಮಾಣಿಕ ನಂಬಿಕೆಯಿಂದ ಸಂಧಾನಕ್ಕೆ ಬಂದರೆ ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ, ಆದರೆ ನಮ್ಮೊಂದಿಗೆ ಆಟವಾಡಲು ಯತ್ನಿಸಿದರೆ ಸುಮ್ಮನಿರುವುದಿಲ್ಲ" ಎಂದು ಎಚ್ಚರಿಸಿದ್ದಾರೆ. ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಇರಾನ್‌ಗೆ ಕಟು ಎಚ್ಚರಿಕೆ ನೀಡಿದ್ದು, ಜಗತ್ತನ್ನು ಸುಲಿಗೆ ಮಾಡಲು ಪ್ರಯತ್ನಿಸಬೇಡಿ, ಇರಾನ್ ಉಳಿಯಬೇಕಾದರೆ ಸಂಧಾನವೊಂದೇ ದಾರಿ ಎಂದು ಗುಡುಗಿದ್ದಾರೆ.

ಮತ್ತೊಂದೆಡೆ, ಶಾಂತಿ ಮಾತುಕತೆಗೆ ಇರಾನ್ ಎರಡು ಪ್ರಮುಖ ಷರತ್ತುಗಳನ್ನು ವಿಧಿಸಿದೆ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಈ ಬಗ್ಗೆ ಮಾಹಿತಿ ನೀಡಿದ್ದು, ಮಾತುಕತೆ ಆರಂಭವಾಗುವ ಮುನ್ನ ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಯಾಗಬೇಕು ಮತ್ತು ಅಮೆರಿಕ ಮುಟ್ಟುಗೋಲು ಹಾಕಿಕೊಂಡಿರುವ ಇರಾನ್‌ನ ಸ್ವತ್ತುಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಲೆಬನಾನ್ ಮೇಲಿನ ದಾಳಿಯನ್ನು ಖಂಡಿಸಿರುವ ಇರಾನ್, ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸದಿದ್ದರೂ, ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.