ಗುರುವಾರ ಇರಾಕ್‌ನ ಪ್ರಾದೇಶಿಕ ಸಮುದ್ರ ಗಡಿಯಲ್ಲಿ ಅಮೆರಿಕ ಸೇರಿದಂತೆ ಎರಡು ವಿದೇಶಿ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ದಾಳಿ ನಡೆಸಿದ್ದು, ಪರಿಣಾಮ ಹಡಗುಗಳು ಬೆಂಕಿಗಾಹುತಿಯಾಗಿದೆ. ಘಟನೆಯಲ್ಲಿ ಒಬ್ಬ ಭಾರತೀಯ ಸಾವನ್ನಪ್ಪಿದ್ದು, 38 ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾಕ್‌ನ ಬಸ್ರಾ ಬಳಿ ನಿನ್ನೆ ಅಮೆರಿಕ ಸ್ವಾಮ್ಯದ ಕಚ್ಚಾ ತೈಲ ಟ್ಯಾಂಕರ್ ಸಫೆಸಿಯಾ ವಿಷ್ಣು ಮೇಲೆ ಇರಾನ್ ದಾಳಿ ನಡೆಸಿದೆ. ಇದರಲ್ಲಿದ್ದ 15 ಜನರು ಭಾರತೀಯರನ್ನು ರಕ್ಷಿಸಲಾಗಿದೆ. ಅವರೆಲ್ಲರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಬಾಗ್ದಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಇರಾಕ್‌ನ ಪ್ರಾದೇಶಿಕ ನೀರಿನಲ್ಲಿ ದಾಳಿಗೊಳಗಾದ ನಂತರ ಪರ್ಷಿಯನ್ ಕೊಲ್ಲಿಯಲ್ಲಿ ಮತ್ತೊಂದು ತೈಲ ಟ್ಯಾಂಕರ್ ಕೂಡ ಬೆಂಕಿಗೆ ಆಹುತಿಯಾಗಿದೆ. ಇರಾನ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ನೀರೊಳಗಿನ ಡೋನ್ ನಿಂದ ದಾಳಿ ನಡೆಸಿದೆ. ಇದು ಪರ್ಷಿಯನ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್‌ಗಳನ್ನು ಸ್ಪೋಟಿಸಿದೆ.
ದಾಳಿಗೊಳಗಾದ ಹಡಗುಗಳು ಮಾಲ್ವಿಸ್ ಧ್ವಜ ಹೊಂದಿರುವ ಜೆಫಿರೋಸ್ ಮತ್ತು ಮಾರ್ಷಲ್ಲೀಸ್ ಧ್ವಜ ಹೊಂದಿರುವ ಸಫೆಸಿಯಾ ವಿಷ್ಣು ಆಗಿದೆ. ಸಫೆಸಿಯಾ ವಿಷ್ಣು ಯುಎಸ್ ಮೂಲದ ಕಂಪನಿ ಸಫೆಸಿಯಾ ಟ್ರಾನ್ಸ್‌ಪೋರ್ಟ್ ಇಂಕ್ ಒಡೆತನದಲ್ಲಿದೆ. ಆದರೆ ಜೆಫಿರೋಸ್ ಮಾಲೀಕರು ಗ್ರೀಸ್‌ನಲ್ಲಿ ನೆಲೆಸಿದ್ದಾರೆ.
ಇರಾಕ್‌ನಲ್ಲಿರುವ ಅಧಿಕಾರಿಗಳು ಮತ್ತು ರಕ್ಷಿಸಲ್ಪಟ್ಟ ಭಾರತೀಯ ನಾವಿಕರೊಂದಿಗೆ ಭಾರತೀಯ ರಾಯಭಾರ ಕಚೇರಿ ನಿಯಮಿತವಾಗಿ ಸಂಪರ್ಕದಲ್ಲಿದೆ ಎಂದು ಹೇಳಿದೆ. ಇನ್ನು ದಾಳಿಗೊಳಗಾದ ಎರಡೂ ಹಡಗಿನಿಂದ ಒಟ್ಟು 38 ಜನರನ್ನು ರಕ್ಷಿಸಲಾಗಿದೆ. ಆದರೆ ಒಬ್ಬ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದು, ಇನ್ನೂ ಕೆಲವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.