ಅರಾಜಕತೆಯೇ ರಾಜ್ಯ ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅವರು ರಾಜ್ಯಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಕಾಂಗ್ರೆಸ್ ಅಧಿಕಾರದಲ್ಲಿದೆ, ಜನರು ಬೀದಿಗಿಳಿದಿದ್ದಾರೆ!" ಕಾಂಗ್ರೆಸ್ ಸರ್ಕಾರದ ಕೆಟ್ಟ ಕೊಳಕು ಆಡಳಿತದಿಂದ ಸಮಾಜದ ಪ್ರತಿ ವರ್ಗ ಬೀದಿಗಿಳಿದು ಹೋರಾಟ ನಡೆಸುತ್ತಿದೆ. ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಂದ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ; ಖಾಲಿ ಹುದ್ದೆ ಭರ್ತಿ ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ವೈದ್ಯರಿಂದ ಮಾರ್ಚ್ 11 ರಿಂದ ಒಪಿಡಿ ಬಂದ್ ಮಾಡಲಾಗುತ್ತಿದೆ.
37,000 ಕೋಟಿ ರೂ. ಬಾಕಿಗೆ ಆಗ್ರಹಿಸಿ ಗುತ್ತಿಗೆದಾರರಿಂದ ಮಾರ್ಚ್ 6 ರಂದು ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ; ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಅಲೆಮಾರಿ ಸಮುದಾಯಗಳ ಪ್ರತಿಭಟನೆ ನಡೆಸುತ್ತಿದ್ದಾರೆ.
ಒಳಮೀಸಲಾತಿಯಿಂದ ಆಗಿರುವ ಅನ್ಯಾಯ ವಿರುದ್ಧ ಎಸ್ಸಿ ಬಲಗೈ ಸಮುದಾಯ ಪ್ರತಿಭಟನೆ; ಬಿಡದಿ ಟೌನ್‌ಶಿಪ್ ಯೋಜನೆ, ಸೆಣಬು ಸಬ್ಸಿಡಿ ಬಂದ್, ಕಬ್ಬು ಬಿಲ್ ಬಾಕಿ ವಿರುದ್ಧ ರೈತರಿಂದ ಬೀದಿಳಿಗಿದು ಪ್ರತಿಭಟನೆ ಮಾಡಿದ್ದಾರೆ.
ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗೆ ಒತ್ತಾಯಿಸಿ ಫೆಬ್ರವರಿ 27 ರಿಂದ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ; 38 ತಿಂಗಳ ಹಿಂಬಾಕಿಗಾಗಿ ಸಾರಿಗೆ ನೌಕರರಿಂದ ಮುಷ್ಕರ ನಡೆಸುತ್ತಿದ್ದಾರೆ.
ಅರಾಜಕ ಮುಖ್ಯಮಂತ್ರಿ @siddaramaiah ನವರೇ, ನಿಮ್ಮ ಭ್ರಷ್ಟ ಆಡಳಿತದಲ್ಲಿ ಒಬ್ಬರಾದರೂ ನೆಮ್ಮದಿಯಿಂದ ಇದ್ದಾರಾ? ಸರ್ಕಾರದ ಖಜಾನೆ ಖಾಲಿಯಾಗಿರುವುದಕ್ಕೆ ಈ ಹೋರಾಟಗಳಿಗಿಂತ ಬೇರೆ ಸಾಕ್ಷಿ ಬೇಕೆ? ಇಡೀ ಕರ್ನಾಟಕ ಇಂದು ಅರಾಜಕತೆಯಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.