ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಮತ್ತೆ ಚರ್ಚೆಗಳು ಜೋರಾಗಿವೆ. ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದ ಎರಡೂ ಪಕ್ಷಗಳು ಮುಂದೆಯೂ ಜೊತೆಯಾಗಿರುತ್ತವೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ನಾಯಕರು ಮೈತ್ರಿ ಮುಂದುವರಿಯುತ್ತದೆ ಎಂದು ಹೇಳುತ್ತಿದ್ದರೂ, ನೆಲಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬೇರೆ ಚಿತ್ರಣವನ್ನು ನೀಡುತ್ತಿವೆ. ಇತ್ತೀಚೆಗೆ ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ ನಡೆಸುವ ಬದಲು ಬಿಜೆಪಿ ಮತ್ತು ಜೆಡಿಎಸ್ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿವೆ. ಇದರಿಂದ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಚರ್ಚೆಗೆ ಮತ್ತಷ್ಟು ಬಲ ಸಿಕ್ಕಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೈತ್ರಿಗೆ ಬದ್ಧರಾಗಿರುವ ಸಂದೇಶ ನೀಡುತ್ತಿದ್ದರೂ, ಬಿಜೆಪಿಯೊಳಗೆ ಮಾತ್ರ ಮೈತ್ರಿ ಕುರಿತು ಒಂದೇ ರೀತಿಯ ಅಭಿಪ್ರಾಯ ಇಲ್ಲ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜಕೀಯ ಸಮೀಕರಣಗಳು ಬದಲಾದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದು ಎಂಬ ಆತಂಕ ಬಿಜೆಪಿಯ ಕೆಲವು ನಾಯಕರಲ್ಲಿ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಬಣ ಮಾತ್ರವಲ್ಲದೆ, ಪಕ್ಷದ ವಿರೋಧಿ ಬಣದಲ್ಲೂ ಮೈತ್ರಿ ಮುಂದುವರಿಕೆಗೆ ಅಸಮಾಧಾನ ವ್ಯಕ್ತವಾಗುತ್ತಿದೆ ಎನ್ನಲಾಗಿದೆ. ಮೈತ್ರಿ ಮುಂದುವರಿದರೆ ಹಲವು ಕ್ಷೇತ್ರಗಳಲ್ಲಿ ಟಿಕೆಟ್ ಕೈತಪ್ಪುವ ಭಯ ಸ್ಥಳೀಯ ನಾಯಕರಲ್ಲಿದೆ ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ. ಇದೇ ಪರಿಸ್ಥಿತಿ ಜೆಡಿಎಸ್‌ನಲ್ಲೂ ಇದೆ ಎನ್ನಲಾಗುತ್ತಿದೆ. ಮೈತ್ರಿಯಿಂದ ಪಕ್ಷದ ಸ್ವತಂತ್ರ ಅಸ್ತಿತ್ವಕ್ಕೆ ಧಕ್ಕೆಯಾಗಬಹುದು ಎಂದು ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಎರಡೂ ಪಕ್ಷಗಳಲ್ಲೂ ಮೈತ್ರಿ ಪರ ಮತ್ತು ವಿರೋಧಿ ಧ್ವನಿಗಳು ಕೇಳಿಬರುತ್ತಿವೆ. ಇತ್ತ ಈ ಎಲ್ಲಾ ಬೆಳವಣಿಗೆಗಳನ್ನು ಕಾಂಗ್ರೆಸ್ ಕೂಡ ಗಮನಿಸುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಉಳಿದರೂ, ಮುರಿದರೂ ರಾಜಕೀಯವಾಗಿ ಲಾಭವಾಗಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿದೆ ಎನ್ನಲಾಗುತ್ತಿದೆ. ಇದೇ ವೇಳೆ ಉಭಯ ಪಕ್ಷಗಳ ಅತೃಪ್ತ ನಾಯಕರನ್ನು ತನ್ನತ್ತ ಸೆಳೆಯುವ ತಂತ್ರವನ್ನೂ ಕಾಂಗ್ರೆಸ್ ರೂಪಿಸುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಸದ್ಯಕ್ಕೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೈತ್ರಿ ಮುಂದುವರಿಯುತ್ತದೆ ಎಂದು ಹೇಳುತ್ತಿದ್ದರೂ, ನೆಲಮಟ್ಟದ ಬೆಳವಣಿಗೆಗಳು ಹಾಗೂ ಎರಡೂ ಪಕ್ಷಗಳೊಳಗಿನ ಅಸಮಾಧಾನ ಮುಂದಿನ ದಿನಗಳಲ್ಲಿ ಮೈತ್ರಿಯ ಭವಿಷ್ಯ ಯಾವ ದಿಕ್ಕಿಗೆ ಸಾಗಲಿದೆ ಎಂಬ ಕುತೂಹಲ ಹೆಚ್ಚಿಸಿವೆ.