ಅಮೆರಿಕದ ಶ್ವೇತಭವನದಲ್ಲಿ ಆಯೋಜಿಸಲಾಗಿದ್ದ ಗಣ್ಯರ ಸಭೆಯಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ನಡೆದ ಈ ದಾಳಿಯಿಂದ ಇಡೀ ಜಗತ್ತು ಬೆಚ್ಚಿಬಿದ್ದಿದೆ. ಈ ಘಟನೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಲವಾಗಿ ಖಂಡಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಎಕ್ಸ್ (X) ಮೂಲಕ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಅಧ್ಯಕ್ಷ ಟ್ರಂಪ್, ಪ್ರಥಮ ಮಹಿಳೆ ಮತ್ತು ಉಪಾಧ್ಯಕ್ಷರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಸಮಾಧಾನವಾಯಿತು. ಅವರ ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಎಂದಿಗೂ ಸ್ಥಾನವಿಲ್ಲ, ಇದನ್ನು ಎಲ್ಲರು ಖಂಡಿಸಬೇಕು ಎಂದು ಹೇಳಿದ್ದಾರೆ. ಬಹು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ದಾಳಿಕೋರನು ಭದ್ರತಾ ತಪಾಸಣಾ ಕೇಂದ್ರವನ್ನು ಭೇದಿಸಿ ಸಭಾಂಗಣದತ್ತ ಧಾವಿಸುತ್ತಿದ್ದ ದೃಶ್ಯಗಳು ವೈರಲ್ ಆಗಿವೆ. ಆದರೆ, ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಪ್ರಾಣದ ಹಂಗು ತೊರೆದು ಆತನನ್ನು ಹಿಮ್ಮೆಟ್ಟಿಸಿ ವಶಕ್ಕೆ ಪಡೆದರು. ಶ್ವೇತಭವನದ ವರದಿಗಾರರ ಭೋಜನ ಕೂಟದಿಂದ ಶಂಕಿತ ಶೂಟರ್‌ನ ಮೊದಲ ಚಿತ್ರ ಹೊರಬಂದಿದ್ದು, ವಾಷಿಂಗ್ಟನ್ ಹಿಲ್ಟನ್‌ನ ಮೆಟ್ಟಿಲುಗಳ ಬಳಿ ಕಾನೂನು ಜಾರಿ ಸಂಸ್ಥೆಗಳು ಆತನನ್ನು ಬಂಧಿಸಿರುವುದನ್ನು ತೋರಿಸುತ್ತದೆ. ಶಂಕಿತ ಶೂಟರ್ ಅನ್ನು ಕ್ಯಾಲಿಫೋರ್ನಿಯಾದ ಟೊರೆನ್ಸ್‌ನ 31 ವರ್ಷದ ಕೋಲ್ ತೋಮಸ್ ಅಲೆನ್ ಎಂದು ಗುರುತಿಸಲಾಗಿದೆ ಎಂದು ವರದಿಗಳು ತಿಳಿಸಿವೆ.