ನವದೆಹಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಕೃಷಿ ಮತ್ತು ಡೈರಿಯಂತಹ ಸೂಕ್ಷ್ಮ ವಲಯಗಳ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.
ಈ ಒಪ್ಪಂದ ಕುರಿತು ಲೋಕಸಭೆಯಲ್ಲಿ ಇಂದು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು. ಆಗ ಮಾತನಾಡಿದ ಸಚಿವರು ಈ ಸ್ಪಷ್ಟನೆ ನೀಡಿದರು.
ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೃಷಿ ಮತ್ತು ಡೈರಿಯಂತಹ ಸೂಕ್ಷ್ಮ ವಲಯಗಳ ಹಿತಾಸಕ್ತಿಗಳನ್ನು ಕಾಪಾಡಿದೆ. ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಭಾರತದ ಮೇಲೆ ವಿಧಿಸಿದ್ದ ಶೇ.50 ರಷ್ಟುಸುಂಕವನ್ನು ಶೇ.18ಕ್ಕೆ ಇಳಿಸಲಾಗಿದೆ. ಇದು ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತದಂತಹ ಉಪಕ್ರಮಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಒತ್ತಿ ಹೇಳಿದರು.
ಈ ಒಪ್ಪಂದವು ಸಣ್ಣ ಮತ್ತು ಮಧ್ಯಮ ವ್ಯವಹಾರಗಳು, ಎಂಎಸ್‌ಎಂಇ, ಕೈಗಾರಿಕೋದ್ಯಮ, ಕೌಶಲ್ಯಪೂರ್ಣ ಕೆಲಸಗಾರರಿಗೆ ಹೊಸ ಅವಕಾಶಗಳನ್ನು ತೆರೆದಿಡುತ್ತದೆ. ಇದು ಸುಧಾರಿತ ತಂತ್ರಜ್ಞಾನಗಳನ್ನು ತಲುಪುವುದನ್ನು ಸರಳಗೊಳಿಸುತ್ತದೆ ಮತ್ತು ಭಾರತದ ‘ಮೇಕ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್’, ‘ಡಿಸೈನ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್’ ಮತ್ತು ‘ಇನ್ನೋವೇಟ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್’ ಅನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಚಿವರು ಸದನದ ಗಮನಕ್ಕೆ ತಂದರು.
ಭಾರತದ ನೆರೆಯ ರಾಷ್ಟ್ರಗಳಿಗಿಂತ ಈ ಸುಂಕ ಕಡಿಮೆಯಾಗಿದೆ. ಈ ಒಪ್ಪಂದದಿಂದ ದೇಶದ ಕಾರ್ಮಿಕ ಆಧಾರಿತ ವಲಯಗಳು ಅಮೆರಿಕ ಮಾರುಕಟ್ಟೆಯಲ್ಲಿ ರಫ್ತು ಉತ್ತೇಜನವನ್ನು ಪಡೆಯುತ್ತವೆ ಎಂದು ಹೇಳಿದರು.
ಒಪ್ಪಂದ ಕುರಿತು ಕಳೆದ ಒಂದು ವರ್ಷದಿಂದ ಉಭಯ ದೇಶಗಳು ವಿಸ್ತೃತವಾದ ಚರ್ಚೆ ನಡೆಸಿವೆ. ಎರಡೂ ದೇಶಗಳು ತಮ್ಮ ತಮ್ಮ ಪ್ರಮುಖ ಮತ್ತು ಸೂಕ್ಷ್ಮ ಕ್ಷೇತ್ರಗಳನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡುವುದು ಸ್ವಾಭಾವಿಕ ಕ್ರಮವೇ ಆಗಿದೆ. ಸುದೀರ್ಘ ಒಂದು ವರ್ಷದ ಚರ್ಚೆಯ ನಂತರ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ವಿವಿಧ ವಲಯಗಳಿಗೆ ಅಂತಿಮ ರೂಪ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.