ಬೆಂಗಳೂರು: ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ಉದ್ಯಮ ನಡೆಸಲು ಹೊರಟಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಬ್ಬ ವ್ಯಕ್ತಿಯ ದಾಕ್ಷಿಣ್ಯಕ್ಕೆ ಬಲಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಿಯಲ್ ಎಸ್ಟೇಟ್ ದಲ್ಲಾಳಿ ಆಗಬಾರದು. ಆ ವ್ಯಕ್ತಿ ಹೇಳಿದಂತೆ ಕೇಳಿದರೆ ಇನ್ನೂ ಎರಡು ವರ್ಷ ಕುರ್ಚಿ ಉಳಿಯಬಹುದು ಎಂದು ಸಿದ್ದರಾಮಯ್ಯ ಹೀಗೆ ನಡೆದುಕೊಳ್ಳುತ್ತಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ತಮ್ಮ ಸಹಿಯನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಅವರು ಅಧಿಕಾರದ ಕೊನೆಗಾಲದಲ್ಲಿ ಹೆಸರು ಕೆಡಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
2006ರಲ್ಲಿ ಬೆಂಗಳೂರಿನ ಸುತ್ತ ಐದು ಟೌನ್‌ಶಿಪ್‌ಗಳನ್ನು ನಿರ್ಮಾಣ ಮಾಡಲು ಆದೇಶ ನಾನು ಹೊರಡಿಸಿದ್ದೆ. ಆಗ ಕಾಂಗ್ರೆಸ್ ಮುಖಂಡರು ಯೋಜನೆಯನ್ನು ವಿರೋಧಿಸಿದ್ದರು. ಆಗ ಟೌನ್‌ಶಿಪ್ ವಿರೋಧಿಸಿದ್ದವರು ಈಗ ತಾವೇ ಬಿಡದಿ ಟೌನ್‌ಶಿಪ್ ನಿರ್ಮಿಸಲು ಹೊರಟಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆಯಲ್ಲಿ ಸಾವಿರಾರು ಎಕರೆ ಭೂಮಿ ಕಬಳಿಕೆ ಆಗುತ್ತಿದೆ. ಅಲ್ಲದೆ, ಸಾಲು ಸಾಲು ಅಕ್ರಮಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.
ಬಿಡದಿ ಟೌನ್‌ಶಿಪ್‌ಗೆ ಎಂಟು ಹಳ್ಳಿಗಳ ವ್ಯಾಪ್ತಿಯಲ್ಲಿ ಒಟ್ಟು 2,320 ಎಕರೆ ಸರ್ಕಾರಿ ಜಮೀನು ಇದೆ ಎಂದು ಉಲ್ಲೇಖಿಸಲಾಗಿದೆ. ಈಗ ಅಧಿಸೂಚನೆಯಲ್ಲಿ 750 ಎಕರೆ ಸರ್ಕಾರಿ ಜಮೀನು ಇದೆ ಎಂದಷ್ಟೇ ಉಲ್ಲೇಖಿಸಲಾಗಿದೆ. ಉಳಿದ 1,570 ಎಕರೆ ಸರ್ಕಾರಿ ಜಮೀನು ಎಲ್ಲಿದೆ? ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಎಷ್ಟು ಜಮೀನು ಹೋಗಿದೆ? ಆ ಜಮೀನನ್ನು ತಮ್ಮ ತಮ್ಮಳ ಹೆಸರಿಗೆ ಮಾಡಿಕೊಂಡು ಸರ್ಕಾರದಿಂದ ಪರಿಹಾರ ಪಡೆಯಲು ಹೊರಟಿದ್ದಾರೆ ಎಂದು ವಿವರಿಸಿದರು.
ಎ ಖಾತಾ, ಬಿ ಖಾತಾ ಹೆಸರಿನಲ್ಲಿ ದುಡ್ಡು ಹೊಡೆಯಲು ಬೆಂಗಳೂರು ಅಭಿವೃದ್ಧಿ ಸಚಿವರು ಹೊರಟಿದ್ದಾರೆ. ಅವರು
ಹೇಳುತ್ತಿರುವುದೆಲ್ಲಾ ಸುಳ್ಳು. ಜನರು ಹಣ ಕಳೆದುಕೊಳ್ಳಬಾರದು. ಎರಡು ವರ್ಷದ ನಂತರ ನಮ್ಮ ಸರ್ಕಾರ ಬರುತ್ತದೆ. ಆಗ ಎ ಖಾತಾವನ್ನು ಉಚಿತವಾಗಿಯೇ ಮಾಡಿಕೊಡುತ್ತೇವೆ ಎಂದರು.